Ind vs NZ Kanpur Test: ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ, ಟೀಂ ಇಂಡಿಯಾ ದಿಟ್ಟ ಆರಂಭ

* ನ್ಯೂಜಿಲೆಂಡ್ ಎದುರು ದಿಟ್ಟ ಆರಂಭ ಪಡೆದ ಟೀಂ ಇಂಡಿಯಾ

* ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 82/1

* ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್

Ind vs NZ Kanpur Test Shubman Gill 50 keeps Team India steady at Lunch Day 1 kvn

ಕಾನ್ಪುರ(ನ.25): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ (Team India) ಉತ್ತಮ ಆರಂಭ ಪಡೆದಿದೆ. ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್ (Shubman Gill) ಆಕರ್ಷಕ ಅರ್ಧಶತಕ ಚಚ್ಚಿದ್ದು, ಮೊದಲ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು 82 ರನ್ ಬಾರಿಸಿದ್ದು, ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ (Ajinkya Rahane) ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್‌ ಮಾಡಲು ಆರಂಭಿಕರು ಮುಂದಾದರು. ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ (Mayank Agarwal) ಎರಡು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಕಿವೀಸ್‌ ನೀಳಕಾಯದ ವೇಗಿ ಕೈಲ್ ಜೇಮಿಸನ್‌ (Kyle Jamieson), ಮಯಾಂಕ್‌ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶ ನೀಡಲಿಲ್ಲ. ಪಂದ್ಯದ 8ನೇ ಓವರ್‌ಲ್ಲಿ ಮಯಾಂಕ್‌ ಅಗರ್‌ವಾಲ್‌ 28 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 13 ರನ್‌ ಬಾರಿಸಿ ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ ಕೇವಲ 21 ರನ್‌ ಗಳಿಸಿತ್ತು.

ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ: ಯುವ ಆರಂಭಿಕ ಬ್ಯಾಟರ್‌ ಗಿಲ್‌ ತವರಿನಲ್ಲಿ ಇಂಗ್ಲೆಂಡ್‌ ವಿರುದ್ದದ ಟೆಸ್ಟ್ ಸರಣಿಯಲ್ಲಿ ರನ್‌ ಗಳಿಸಲು ಪರದಾಡಿದ್ದರು. ಇದಾದ ಬಳಿಕ ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಇನ್ನು ಕೆ.ಎಲ್. ರಾಹುಲ್ ಗಾಯದ ಸಮಸ್ಯೆಯಿಂದಾಗಿ ಕಿವೀಸ್ ಸರಣಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಗಿಲ್‌ಗೆ ಮತ್ತೊಮ್ಮೆ ಆರಂಭಿಕನಾಗುವ ಅವಕಾಶ ಬಂದೊದಗಿತ್ತು. ಈ ಅವಕಾಶವನ್ನು ಎರಡೂ ಕೈನಲ್ಲಿ ಬಾಚಿಕೊಂಡ ಗಿಲ್‌ ಕೇವಲ 87 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ ಅಜೇಯ 52 ರನ್‌ ಬಾರಿಸಿದ್ದು, ಮೂರಂಕಿ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿದ್ದಾರೆ.

Ind vs NZ Kanpur Test: ಕಿವೀಸ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಪೂಜಾರ-ಗಿಲ್ ಜುಗಲ್ಬಂದಿ: ಆರಂಭದಲ್ಲೇ ಮಯಾಂಕ್ ವಿಕೆಟ್ ಪತನವಾಗಿದ್ದರಿಂದ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಯುವ ಬ್ಯಾಟರ್‌ ಶುಭ್‌ಮನ್ ಗಿಲ್‌ ಎಚ್ಚರಿಕೆಯ ಬ್ಯಾಟಿಂಗ್ ಮೊರೆ ಹೋದರು. ಬಳಿಕ ಪಿಚ್‌ಗೆ ಕುದುರಿಕೊಳ್ಳುತ್ತಿದ್ದಂತೆಯೇ ಯುವ ಬ್ಯಾಟರ್‌ ಶುಭ್‌ಮನ್‌ ಗಿಲ್ ಲೀಲಾಜಾಲವಾಗಿ ಬ್ಯಾಟ್ ಬೀಸಲಾರಂಭಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 61 ರನ್‌ಗಳ ಜತೆಯಾಟ ನಿಭಾಯಿಸಿದ್ದು, ದೊಡ್ಡ ಮೊತ್ತ ದಾಖಲಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಗಿಲ್ ಅಜೇಯ 52 ರನ್‌ ಬಾರಿಸಿದ್ದರೆ, ಚೇತೇಶ್ವರ್ ಪೂಜಾರ ಎಂದಿನಂತೆ 61 ಎಸೆತಗಳನ್ನು ಎದುರಿಸಿ 15 ರನ್‌ ಗಳಿಸಿದ್ದಾರೆ. ಈ ಜೋಡಿಯನ್ನು ಆದಷ್ಟು ಬೇಗ ಬೇರ್ಪಡಿಸದೇ ಹೋದರೆ ನ್ಯೂಜಿಲೆಂಡ್ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಒಂದು ಕಡೆ ಗಿಲ್ ಚುರುಕಾಗಿ ರನ್‌ ಕಲೆಹಾಕುತ್ತಿದ್ದರೆ, ಪೂಜಾರ ಎಚ್ಚರಿಕೆಯ ಬ್ಯಾಟಿಂಗ್ ಮೊರೆ ಹೋಗಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 82/1
ಶುಭ್‌ಮನ್ ಗಿಲ್: 52
ಚೇತೇಶ್ವರ್ ಪೂಜಾರ: 15
ಕೈಲ್ ಜೇಮಿಸನ್:12/1
(* ಮೊದಲ ದಿನದಾಟದ ಊಟದ ವಿರಾಮದ ವೇಳೆಗೆ)
 

Latest Videos
Follow Us:
Download App:
  • android
  • ios