Asianet Suvarna News Asianet Suvarna News

Ind vs NZ Kanpur Test: ಭಾರತದ 4 ವಿಕೆಟ್‌ ಪತನ, ಅಶ್ವಿನ್-ಅಯ್ಯರ್ ಜತೆಯಾಟದ ಮೇಲೆ ಎಲ್ಲರ ಚಿತ್ತ

* ಕುತೂಹಲಘಟ್ಟದತ್ತ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್

* ನಾಲ್ಕನೇ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ

* ಅಶ್ವಿನ್-ಅಯ್ಯರ್ ಜತೆಯಾಟದ ಮೇಲೆ ಎಲ್ಲರ ಚಿತ್ತ

Ind vs NZ Kanpur Test India Lose Quick wickets All Eyes On Shreyas Iyer R Ashwin Partnership kvn
Author
Bengaluru, First Published Nov 28, 2021, 11:52 AM IST
  • Facebook
  • Twitter
  • Whatsapp

ಕಾನ್ಪುರ(ನ.28): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದ್ದು, ನಾಲ್ಕನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ (Team India) 5 ವಿಕೆಟ್ ಕಳೆದುಕೊಂಡು 84 ರನ್ ಬಾರಿಸಿದ್ದು, ಒಟ್ಟಾರೆ 133 ರನ್‌ಗಳ ಮುನ್ನಡೆ ಸಾಧಿಸಿದೆ. 6ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ರವಿಚಂದ್ರನ್ ಅಶ್ವಿನ್‌ (Ravichandran Ashwin) ಜೋಡಿ ಮರಿಯದ 33 ರನ್‌ಗಳ ಜತೆಯಾಟ ನಿಭಾಯಿಸಿದ್ದು, ಈ ಜೋಡಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 14 ರನ್‌ ಬಾರಿಸಿದ್ದ ಭಾರತ ತಂಡಕ್ಕೆ ಕಿವೀಸ್ ವೇಗಿಗಳು ಆರಂಭದಲ್ಲೇ ಕಾಡಿದರು. ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 22 ರನ್‌ ಬಾರಿಸಿ ಕೈಲ್ ಜೇಮಿಸನ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ (Ajinkya Rahane) ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಸ್ಪಿನ್ನರ್ ಅಜಾಜ್ ಪಟೇಲ್ ಬೌಲಿಂಗ್‌ನಲ್ಲಿ ರಹಾನೆ ಕೇವಲ 4 ರನ್‌ ಬಾರಿಸಿ ಎಲ್‌ಬಿ ಬಲೆಗೆ ಬಿದ್ದರು.

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದ ಸೌಥಿ: ಭಾರತ ವಿರುದ್ದ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಕಿವೀಸ್ ಅನುಭವಿ ವೇಗಿ ಟಿಮ್‌ ಸೌಥಿ (Tim Southee) ಮತ್ತೊಮ್ಮೆ ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಎರಡನೇ ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಟಿಮ್ ಸೌಥಿ, ನೆಲಕಚ್ಚಿ ಆಡುವ ಪ್ರಯತ್ನ ಮಾಡುತ್ತಿದ್ದ ಮಯಾಂಕ್‌ ಅಗರ್‌ವಾಲ್‌ (Mayank Agarwal) (17 ರನ್‌, 53 ಎಸೆತ) ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಡಬಲ್ ಶಾಕ್‌ ನೀಡಿದರು. ಇದರ ಜತೆಗೆ ಭಾರತದ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ 50+ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಕೀರ್ತಿಗೂ ಸೌಥಿ ಭಾಜನರಾಗಿದ್ದಾರೆ. ಭಾರತ ವಿರುದ್ದ 10ನೇ ಟೆಸ್ಟ್ ಆಡುತ್ತಿರುವ ಸೌಥಿ 50 ಬಲಿ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕಿವೀಸ್ ದಿಗ್ಗಜ ವೇಗಿ ರಿಚರ್ಡ್ ಹ್ಯಾಡ್ಲಿ 14 ಪಂದ್ಯಗಳಿಂದ 65 ವಿಕೆಟ್ ಕಬಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Ind vs NZ Kanpur Test: ಅಕ್ಷರ್ ಪಟೇಲ್‌ಗೆ 5 ವಿಕೆಟ್‌, 296 ರನ್‌ಗಳಿಗೆ ಕಿವೀಸ್ ಆಲೌಟ್‌

ಅಯ್ಯರ್-ಅಶ್ವಿನ್ ಜತೆಯಾಟದ ಮೇಲೆ ಎಲ್ಲರ ಚಿತ್ತ: ಹೌದು ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಬಾರಿಸಿದ್ದ ಶ್ರೇಯಸ್ ಅಯ್ಯರ್ ಹಾಗೂ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ ಆಸರೆಯಾಗಿದ್ದಾರೆ. ಆರನೇ ವಿಕೆಟ್‌ಗೆ ಈ ಜೋಡಿ 74 ಎಸೆತಗಳನ್ನು ಎದುರಿಸಿ ಅಜೇಯ 33 ರನ್‌ಗಳ ಜತೆಯಾಟವಾಡಿದೆ. ಶ್ರೇಯಸ್ ಅಯ್ಯರ್ 18 ರನ್ ಹಾಗೂ ರವಿಚಂದ್ರನ್ ಅಶ್ವಿನ್ 20 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಈ ಜೋಡಿಯಿಂದ ದೊಡ್ಡ ಮೊತ್ತದ ಜತೆಯಾಟ ಮೂಡಿಬಂದರೇ ಕಿವೀಸ್‌ ತಂಡಕ್ಕೆ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಕಬ್ಬಿಣದ ಕಡಲೆಯಾಗಬಹುದು

ಸಂಕ್ಷಿಪ್ತ ಸ್ಕೋರ್

ಭಾರತ: 345/10

ಶ್ರೇಯಸ್ ಅಯ್ಯರ್: 105

ಟಿಮ್ ಸೌಥಿ: 69/5

ನ್ಯೂಜಿಲೆಂಡ್: 296/10

ಟಾಮ್ ಲೇಥಮ್: 95

ಅಕ್ಷರ್ ಪಟೇಲ್: 62/5

ಭಾರತ: 84/5 (ಎರಡನೇ ಇನಿಂಗ್ಸ್‌)

ಚೇತೇಶ್ವರ್ ಪೂಜಾರ: 22

ಕೈಲ್ ಜೇಮಿಸನ್: 22/2

(* ನಾಲ್ಕನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)

 

Follow Us:
Download App:
  • android
  • ios