Asianet Suvarna News Asianet Suvarna News

Ind vs NZ Kanpur Test: ಅಕ್ಷರ್ ಪಟೇಲ್‌ಗೆ 5 ವಿಕೆಟ್‌, 296 ರನ್‌ಗಳಿಗೆ ಕಿವೀಸ್ ಆಲೌಟ್‌

* ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವು 296 ರನ್‌ಗಳಿಗೆ ಆಲೌಟ್

* ಅಕ್ಷರ್‌ ಪಟೇಲ್‌ಗೆ 5 ವಿಕೆಟ್‌, ಅಶ್ವಿನ್‌ ಪಾಲಾದ 3 ವಿಕೆಟ್

* ಭಾರತಕ್ಕೆ ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗಳ ಮುನ್ನಡೆ

Ind vs NZ Kanpur Test Axar Patel gets Fifer New Zealand All out for 296 India FIL 49 kvn
Author
Bengaluru, First Published Nov 27, 2021, 4:03 PM IST

ಕಾನ್ಪುರ(ನ.27): ಎಡಗೈ ಸ್ಪಿನ್ನರ್ ಅಕ್ಷರ್‌ (Axar Patel) ಪಟೇಲ್‌ ಚಾಣಾಕ್ಷ ಬೌಲಿಂಗ್‌ ದಾಳಿಗೆ ತತ್ತರಿಸಿದ ಪ್ರವಾಸಿ ನ್ಯೂಜಿಲೆಂಡ್ ತಂಡವು ಕಾನ್ಪುರ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ (Team India) 49 ರನ್‌ಗಳ ಮುನ್ನಡೆ ಸಾಧಿಸಿದೆ. ಅಕ್ಷರ್ ಪಟೇಲ್ 5 ವಿಕೆಟ್ ಪಡೆದರೇ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) 3 ವಿಕೆಟ್ ಉರುಳಿಸಿದರು. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಮೂರನೆ ದಿನದಾಟದಂತ್ಯದ ವೇಳೆಗೆ ಭಾರತ 1 ವಿಕೆಟ್ ಕಳೆದುಕೊಂಡು 14 ರನ್ ಬಾರಿಸಿದ್ದು, ಒಟ್ಟಾರೆ 63 ರನ್‌ಗಳ ಮುನ್ನಡೆ ಪಡೆದಿದೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಗಳಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು (New Zealand Cricket Team), ಮೂರನೇ ದಿನದಾಟದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಮೊದಲ ವಿಕೆಟ್‌ಗೆ ವಿಲ್ ಯಂಗ್ (Will Young) ಹಾಗೂ ಟಾಮ್ ಲೇಥಮ್‌ (Tom Latham) 151 ರನ್‌ಗಳ ಜತೆಯಾಟ ನಿಭಾಯಿಸಿತು. ಈ ಜೋಡಿಯನ್ನು ರವಿಚಂದ್ರನ್ ಅಶ್ವಿನ್‌ ಬೇರ್ಪಡಿಸುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ವಿಲ್‌ ಯಂಗ್ 89 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಮೊದಲ ಸೆಷನ್‌ನ ಕೊನೆಯಲ್ಲಿ ಕೇನ್ ವಿಲಿಯಮ್ಸನ್‌ (Kane Williamson) ವಿಕೆಟ್ ಕಬಳಿಸುವಲ್ಲಿ ವೇಗಿ ಉಮೇಶ್ ಯಾದವ್ (Umesh Yadav) ಯಶಸ್ವಿಯಾದರು.

ಮತ್ತೊಮ್ಮೆ ಜಾದೂ ಮಾಡಿದ ಅಕ್ಷರ್ ಪಟೇಲ್: ಒಂದು ಹಂತದಲ್ಲಿ 213 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡವು ತನ್ನ ಖಾತೆಗೆ 57 ರನ್ ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಲು ಕಾರಣ ಅಕ್ಷರ್ ಪಟೇಲ್‌ ಮಿಂಚಿನ ಬೌಲಿಂಗ್ ಪ್ರದರ್ಶನ. ನ್ಯೂಜಿಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕಿವೀಸ್‌ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟಿಂಗ್ ನಡೆಸಲು ಅಕ್ಷರ್ ಪಟೇಲ್ ಅವಕಾಶ ನೀಡಲಿಲ್ಲ. ರಾಸ್ ಟೇಲರ್‌, ಹೆನ್ರಿ ನಿಕೋಲಸ್‌, ಟಾಮ್ ಬ್ಲಂಡಲ್‌, ಟಾಮ್ ಲೇಥಮ್ ಹಾಗೂ ಟಿಮ್ ಸೌಥಿ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಕಿವೀಸ್‌ ರನ್‌ ವೇಗಕ್ಕೆ ಕಡಿವಾಣ ಹಾಕಿದರು.

ದಾಖಲೆ ಮಾಡಿದ ಅಕ್ಷರ್ ಪಟೇಲ್‌: ವೃತ್ತಿ ಜೀವನದ ನಾಲ್ಕನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್‌ ದಾಖಲೆಯ 5ನೇ ಬಾರಿಗೆ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಮೊದಲ 4 ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ ಐದು ವಿಕೆಟ್‌ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಟಾಮ್ ರಿಚರ್ಡ್‌ಸನ್‌, ರಾಂಡೈ ಹಾಗ್‌ ಜತೆ ಜಂಟಿ ಎರಡನೇ ಸ್ಥಾನಕ್ಕೇರಿ ದಾಖಲೆ ಬರೆದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಚಾರ್ಲಿ ಟರ್ನರ್‌ ಮೊದಲ 4 ಪಂದ್ಯಗಳಲ್ಲಿ 6 ಬಾರಿ 5+ ವಿಕೆಟ್‌ ಕಬಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಒಂದು ವೇಳೆ ಅಕ್ಷರ್ ಪಟೇಲ್ ಮತ್ತೊಮ್ಮೆ 5 ವಿಕೆಟ್ ಪಡೆದರೆ ಟರ್ನರ್‌ ಜತೆ ಜಂಟಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

Ind vs NZ Kanpur Test: ಅಕ್ಷರ್ ಮೋಡಿ, ಕಮ್‌ಬ್ಯಾಕ್ ಮಾಡಿದ ಟೀಂ ಇಂಡಿಯಾ..!

ಇನ್ನು ಕಿವೀಸ್ ವೇಗದ ಬೌಲರ್ ಕೈಲ್ ಜೇಮಿಸನ್‌ ಕೆಲಕಾಲ ಭಾರತೀಯ ಬೌಲರ್‌ಗಳನ್ನು ಕಾಡಿದರು. ಒಟ್ಟು 75 ಎಸೆತಗಳನ್ನು ಎದುರಿಸಿದ ಜೇಮಿಸನ್ ಒಂದು ಬೌಂಡರಿ ಸಹಿತ 23 ರನ್‌ ಗಳಿಸಿದರು. ನಿರಂತರವಾಗಿ ಬೌಲಿಂಗ್‌ ಮಾಡುತ್ತಿದ್ದ ಅಶ್ವಿನ್ ಕೊನೆಗೂ ಜೇಮಿಸನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಮತ್ತೊಂದು ತುದಿಯಲ್ಲಿ 52 ಎಸೆತಗಳನ್ನು ಎದುರಿಸಿ 6 ರನ್‌ ಗಳಿಸಿದ್ದ ವಿಲಿಯಂ ಸೋಮರ್‌ವಿಲ್ಲೇ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಿವೀಸ್‌ ಇನಿಂಗ್ಸ್‌ಗೆ ತೆರೆ ಎಳೆದರು. 


 

Follow Us:
Download App:
  • android
  • ios