ಟೀಂ ಇಂಡಿಯಾಗೆ ನೆರವಾದ ಕನ್ನಡಿಗರು; ಸ್ಫರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ
ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಗೌರವಾನ್ವಿತ ಮೊತ್ತ ಕಲೆಹಾಕಿದ್ದು, ಕಿವೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದೆ.4ನೇ ಟಿ20 ಪಂದ್ಯದಲ್ಲಿ ಕಿವೀಸ್ ಗೆಲ್ಲಲು 166 ರನ್‌ಗಳ ಸಿಕ್ಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ವೆಲ್ಲಿಂಗ್ಟನ್(ಜ.31): ನ್ಯೂಜಿಲೆಂಡ್ ಎದುರು ಮೊದಲ 3 ಪಂದ್ಯ ಗೆದ್ದು ಬೀಗಿದ್ದ ಟೀಂ ಇಂಡಿಯಾ, 4ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಕನ್ನಡಿಗರಾದ ಮನೀಶ್ ಪಾಂಡೆ(50) ಆಕರ್ಷಕ ಅರ್ಧಶತಕ ಹಾಗೂ ಕೆ.ಎಲ್ ರಾಹುಲ್(39) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 165 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಕನ್ನಡಿಗರ ಸಮಯೋಚಿತ ಬ್ಯಾಟಿಂಗ್ ತಂಡಕ್ಕೆ ಆಸರೆಯಾಗಿದೆ.
ಟಾಸ್ ಗೆದ್ದ ಕಿವೀಸ್ ಹಂಗಾಮಿ ನಾಯಕ ಟಿಮ್ ಸೌಥಿ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್ ದಾಳಿ ನಡೆಸಿದ ಕಿವೀಸ್ ಪಡೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು. ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದರು. ಲಂಕಾ ವಿರುದ್ಧ ಕೇವಲ ಒಂದು ಸಿಕ್ಸರ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಸಂಜು, ಕಿವೀಸ್ ಎದುರು ಒಂದು ಸಿಕ್ಸರ್ ಸಹಿತ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ನಾಯಕ ಕೊಹ್ಲಿ ಜತೆ ರಾಹುಲ್ 34 ರನ್‌ಗಳ ಜತೆಯಾಟ ನಿಭಾಯಿಸಿದರು.
ನ್ಯೂಜಿಲೆಂಡ್‌ನಲ್ಲಿ ಜ್ವಾಲಾಮುಖಿಗೆ ಭಾರತದ ದಂಪತಿ ಬಲಿ
ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ವಿಕೆಟ್ ಪತನದ ಬಳಿಕ ಕೊಹ್ಲಿ-ರಾಹುಲ್ ಜೋಡಿ ಉತ್ತಮ ಜತೆಯಾಟ ಆಡುವ ಮುನ್ಸೂಚನೆ ನೀಡಿದರು. ಆದರೆ ಕೊಹ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸುತ್ತಿದ್ದಂತೆ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಒಂದು ಹಂತದಲ್ಲಿ 48 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 88 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಯ್ಯರ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಶಿವಂ ದುಬೆ ಆಟ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಇನ್ನು ಜಡೇಜಾ ಬದಲು ತಂಡದಲ್ಲಿ ಸ್ಥಾನ ಪಡೆದ ವಾಷಿಂಗ್ಟನ್ ಸುಂದರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ
ಮಾನ ಕಾಪಾಡಿದ ಪಾಂಡ್ಯ-ರಾಕೂರ್: ದಿಢೀರ್ ಕುಸಿತದಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ 7ನೇ ವಿಕೆಟ್‌ಗೆ ಕನ್ನಡಿಗ ಮನೀಶ್ ಪಾಂಡೆ ಹಾಗೂ ವೇಗಿ ಶಾರ್ದೂಲ್ ಠಾಕೂರ್ ಆಸರೆಯಾದರು. ಈ ಜೋಡಿ 43 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಂದಹಾಗೆ ಇದು ಟೀಂ ಇಂಡಿಯಾ ಪರ ಮೂಡಿಬಂದ ಗರಿಷ್ಠ ಬ್ಯಾಟಿಂಗ್ ಜತೆಯಾಟವೆನಿಸಿತು. ಠಾಕೂರ್ 15 ಎಸೆತಗಳಲ್ಲಿ 2 ಬೌಂಡರಿ ಸಹಿತ 20 ರನ್ ಬಾರಿಸಿದರೆ, ಮನೀಶ್ ಪಾಂಡೆ 36 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 50 ರನ್ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ:165/8
ಮನೀಶ್ ಪಾಂಡೆ:50*
ಕೆ.ಎಲ್. ರಾಹುಲ್: 39
ಇಶ್ ಸೋಧಿ: 26/3