Ind vs Ire 3rd T20I: ಐರ್ಲೆಂಡ್ ಎದುರು ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಗುರಿ..!
ಇಂದು ಭಾರತ-ಐರ್ಲೆಂಡ್ ನಡುವಿನ ಮೂರನೇ ಟಿ20 ಕದನ
ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ
ಬುಮ್ರಾ ಪಡೆಯಲ್ಲಿಂದು ಕೆಲವು ಬದಲಾವಣೆ ಮಾಡುವ ಸಾಧ್ಯತೆ
ಡಬ್ಲಿನ್(ಆ.23): ಬ್ಯಾಟರ್‌ಗಳ ಜವಾಬ್ದಾರಿಯುತ ಆಟ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ್ ಕೃಷ್ಣರ ಅತ್ಯುತ್ತಮ ಕಮ್‌ಬ್ಯಾಕ್ ಪ್ರದರ್ಶನದ ಮೂಲಕ ಐರ್ಲೆಂಡ್ ವಿರುದ್ಧ ಈಗಾಗಲೇ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ, 3ನೇ ಪಂದ್ಯದಲ್ಲೂ ಜಯಿಸಿ ಸರಣಿ ಕ್ಲೀನ್‌ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಭಾರತ ಈ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಏಷ್ಯನ್ ಗೇಮ್ಸ್‌ಗೂ ಮುನ್ನ ಕೆಲ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಪಾದಾರ್ಪಣೆಗೆ ಕಾತರಿಸುತ್ತಿದ್ದು, ಅವರು ಆಯ್ಕೆಯಾದರೆ ಸಂಜು ಸ್ಯಾಮ್ಸನ್ ಹೊರಗುಳಿಯಬೇಕಾಗುತ್ತದೆ. ಆದರೆ ಏಷ್ಯಾಕಪ್ ಮೀಸಲು ಆಟಗಾರನಾಗಿರುವ ಸಂಜು ಸ್ಯಾಮ್ಸನ್‌ರನ್ನು ಹೊರಗಿಟ್ಟು ಆಯ್ಕೆ ಸಮಿತಿ ಜಿತೇಶ್‌ಗೆ ಅವಕಾಶ ನೀಡಲಿದೆಯೇ ಎಂಬ ಕುತೂಹಲವಿದೆ. ತಿಲಕ್ ವರ್ಮಾ 2 ಪಂದ್ಯಗಳಲ್ಲಿ ಕೇವಲ 1 ರನ್ ಗಳಿಸಿದ್ದು, ಈ ಪಂದ್ಯದಲ್ಲಾದರೂ ಮಿಂಚಲೇಬೇಕಾದ ಅನಿವಾರ್ಯತೆಯಿದೆ. ಉಳಿದಂತೆ ರಿಂಕು ಸಿಂಗ್ ಡೆತ್ ಓವರ್‌ಗಳಲ್ಲಿ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಬ್ಯಾಟ್‌ನಿಂದಲೂ ರನ್ ಹರಿಯಬೇಕಿದೆ. ವಾಷಿಂಗ್ಟನ್ ಬದಲು ಶಾಬಾಜ್ ಅಹ್ಮದ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
'ಆ ಬಗ್ಗೆ ನನಗ್ಯಾವ ವಿಷಾದವಿಲ್ಲ': ಬಾಂಗ್ಲಾ ಎದುರಿನ ಘಟನೆ ಬಗ್ಗೆ ತುಟಿಬಿಚ್ಚಿದ ಹರ್ಮನ್‌ಪ್ರೀತ್ ಕೌರ್
ಇದೇ ವೇಳೆ ಭಾರತದ ಬೌಲರ್‌ಗಳು ಎರಡೂ ಪಂದ್ಯದಲ್ಲಿ ಮೊನಚು ದಾಳಿ ಸಂಘಟಿಸಿದ್ದು, ಕಳೆದ ಪಂದ್ಯದಲ್ಲಿ ಡೆತ್ ಓವರ್‌ನಲ್ಲೂ ಮಿಂಚಿದ್ದರು. ಬುಮ್ರಾ, ಪ್ರಸಿದ್ಧ್ ಹಾಗೂ ರವಿ ಬಿಷ್ಣೋಯ್ ಎರಡೂ ಪಂದ್ಯಗಳಲ್ಲಿ ಐರ್ಲೆಂಡ್ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇನ್ನುಳಿದಂತೆ ಅರ್ಶ್‌ದೀಪ್ ಸಿಂಗ್ ಬದಲು ಆವೇಶ್ ಖಾನ್‌ಗೆ, ಪ್ರಸಿದ್ಧ್ ಬದಲು ಮುಕೇಶ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.
ಪುಟಿದೇಳುತ್ತಾ ಐರ್ಲೆಂಡ್?: ಐರ್ಲೆಂಡ್ ಟಿ20ಯಲ್ಲಿ ಅಬ್ಬರಿಸುವ ತಂಡ ಎನಿಸಿಕೊಂಡಿದ್ದರೂ ಈ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ನಾಯಕ ಸ್ಟರ್ಲಿಂಗ್, ಲಾರ್ಕನ್ ಟಕ್ಕರ್, ಹ್ಯಾರಿ ಟೆಕ್ಟರ್ ಬ್ಯಾಟ್‌ನಿಂದ ರನ್ ಹರಿದುಬರುತ್ತಿಲ್ಲ. ಆದರೆ ಬಾಲ್ಬರ್ನಿ ಕಳೆದ ಪಂದ್ಯದಂತೆಯೇ ಅಬ್ಬರಿಸಲು ಕಾಯುತ್ತಿದ್ದಾರೆ. ಸಂಘಟಿತ ಪ್ರದರ್ಶನ ತೋರಿದರಷ್ಟೇ ಕ್ಲೀನ್‌ಸ್ವೀಪ್ ಮುಖಭಂಗದಿಂದ ಪಾರಾಗಬಹುದು.
ಏಷ್ಯಾಕಪ್‌ಗೆ ರಾಹುಲ್ ಆಯ್ಕೆಯಾಗಿದ್ದರೂ ಕೆಲ ಪಂದ್ಯ ಆಡೋದು ಡೌಟ್..! ಅಗರ್ಕರ್ ಕೊಟ್ರು ಮಹತ್ವದ ಸುಳಿವು
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್/ಶಾಬಾಜ್ ಅಹಮದ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ(ನಾಯಕ), ಅರ್ಶ್‌ದೀಪ್ ಸಿಂಗ್/ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ.
ಐರ್ಲೆಂಡ್: ಪೌಲ್ ಸ್ಟರ್ಲಿಂಗ್(ನಾಯಕ), ಬಾಲ್ಬರ್ನಿ, ಲಾರ್ಕನ್ ಟಕ್ಕರ್, ಹ್ಯಾರಿ ಟೆಕ್ಟರ್, ಕ್ಯಾಂಫರ್, ಡಾರ್ಕೆಲ್, ಮಾರ್ಕ್ ಅಡೈರ್, ಮೆಕ್ಕಾರ್ಥಿ, ಕ್ರೇಗ್ ಯಂಗ್, ಜೋಶ್ ಲಿಟ್ಲ್, ಬೆನ್ ವೈಟ್.
ಪಂದ್ಯ ಆರಂಭ: ಸಂಜೆ 7.30ಕ್ಕೆ,
ನೇರ ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮತ್ತೊಮ್ಮೆ ದೊಡ್ಡ ಮೊತ್ತ ಹರಿದುಬರುವ ಸಾಧ್ಯತೆ ಹೆಚ್ಚು. ಈ ಪಂದ್ಯಕ್ಕೆ ಮಳೆ ಭೀತಿ ಇದ್ದು, ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.