Asianet Suvarna News Asianet Suvarna News

Ind vs IRE: ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಫೈಟ್..!

* ಮೊದಲ ಟಿ20 ಪಂದ್ಯಕ್ಕೆ ಡಬ್ಲಿನ್ ಕ್ರೀಡಾಂಗಣ ಆತಿಥ್ಯ
* ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಟೀಂ ಇಂಡಿಯಾ
* ನಾಯಕನಾಗಿ ಹಾರ್ದಿಕ್ ಪಾಂಡ್ಯಗಿದು ಅಗ್ನಿಪರೀಕ್ಷೆ

Ind vs IRE 1st T20I Team India take on Ireland in Dublin kvn
Author
Bengaluru, First Published Jun 26, 2022, 10:06 AM IST

ಡಬ್ಲಿನ್‌(ಜೂ.26): ಮುಂಬರುವ ಟಿ20 ವಿಶ್ವಕಪ್‌ಗೆ (ICC T20 World Cup) ಬಲಿಷ್ಠ ತಂಡವನ್ನು ಕಟ್ಟಲು ಎದುರು ನೋಡುತ್ತಿರುವ ಟೀಂ ಇಂಡಿಯಾ (Team India) ಐರ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದ್ದು, ಭಾನುವಾರ 2 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಡಬ್ಲಿನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಆಟಗಾರರನ್ನೊಳಗೊಂಡ ತಂಡವು ಐರ್ಲೆಂಡ್ ಎದುರು ಸವಾರಿ ಮಾಡಲು ಎದುರು ನೋಡುತ್ತಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಆಟಗಾರರು ಇದೀಗ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಈ ಸರಣಿ ಮತ್ತೊಂದು ಸುವರ್ಣಾವಕಾಶವನ್ನು ಒದಗಿಸಿಕೊಟ್ಟಿದೆ.

ಟೀಂ ಇಂಡಿಯಾ ಈ ಸರಣಿಯಲ್ಲಿ ಎಲ್ಲಾ ವಿಭಾಗದಲ್ಲೂ ಪರೀಕ್ಷೆಗೆ ಒಳಗಾಗುವುದು ಖಚಿತ. ಹೊಸ ನಾಯಕ, ಹೊಸ ಕೋಚ್‌ ಅಡಿಯಲ್ಲಿ ಆಡುವ ತಂಡದಲ್ಲಿ ಹಿರಿಯ ಆಟಗಾರರೂ ಲಭ್ಯರಿಲ್ಲ. ಐಪಿಎಲ್‌ನಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಹಾರ್ದಿಕ್‌ ಪಾಂಡ್ಯ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದು, ನಾಯಕತ್ವದ ಅಗ್ನಿಪರೀಕ್ಷೆಗೆ ಒಳಗಾಗಲಿದ್ದಾರೆ. ರಾಹುಲ್‌ ದ್ರಾವಿಡ್‌ ಅನುಪಸ್ಥಿತಿಯಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮನ್‌ ತಂಡಕ್ಕೆ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದು, ಸರಣಿ ಗೆಲುವಿನ ಕಾತರದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರಿಗೆ ದಕ್ಷಿಣ ಆಫ್ರಿಕಾ ಸರಣಿ ಬಳಿಕ 2ನೇ ಅವಕಾಶ ಸಿಕ್ಕಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಈ ಸರಣಿ ವೇದಿಕೆ ಒದಗಿಸಲಿದೆ. ಇಶಾನ್‌ ಕಿಶನ್‌, ಋುತುರಾಜ್‌ ಗಾಯಕ್ವಾಡ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಇರುವ ಬ್ಯಾಟಿಂಗ್‌ ಬಳಗದಲ್ಲಿ ಸೂರ‍್ಯಕುಮಾರ್‌ ಯಾದವ್‌ಗೂ ಸ್ಥಾನ ಸಿಗುವುದು ಖಚಿತ. ಸಂಜು ಸ್ಯಾಮ್ಸನ್‌ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗಲು ಕಾತರಿಸುತ್ತಿದ್ದಾರೆ.

ರಾಹುಲ್ ತ್ರಿಪಾಠಿ, ಉಮ್ರಾನ್‌ ಪಾದಾರ್ಪಣೆ: ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ರಾಹುಲ್‌ ತ್ರಿಪಾಠಿ ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ತವಕದಲ್ಲಿದ್ದಾರೆ. ಇನ್ನು ದ.ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದರೂ ಒಂದೂ ಪಂದ್ಯಕ್ಕೆ ಆಯ್ಕೆಯಾಗದೆ ಉಳಿದಿದ್ದ ವೇಗಿ ಉಮ್ರಾನ್‌ ಮಲಿಕ್‌ ಕೂಡಾ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಹರ್ಷಲ್‌, ಅರ್ಶದೀಪ್‌, ಚಹಲ್‌ಗೆ ಕೂಡಾ ಅವಕಾಶ ಸಿಗಬಹುದು.

ಐರ್ಲೆಂಡ್ ಎದುರಿನ ಸರಣಿಯಲ್ಲಾದ್ರೂ ಟೀಂ ಇಂಡಿಯಾದಲ್ಲಿ ಹೊಸಬರಿಗೆ ಸಿಗುತ್ತಾ ಚಾನ್ಸ್..?

ಇನ್ನು, ಕಳೆದ 3 ವರ್ಷಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಐರ್ಲೆಂಡ್‌ಗೆ ತವರಿನಲ್ಲಿ ಭಾರತದಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಆ್ಯಂಡ್ರೂ ಬಾಲ್ಬಿರ್ನೀ ನೇತೃತ್ವದ ತಂಡದಲ್ಲಿ ಹಿರಿಯ ಆಟಗಾರರ ಜೊತೆ ಕೆಲ ಯುವ ಆಟಗಾರರಿಗೂ ಮಣೆ ಹಾಕಲಾಗಿದ್ದು, ಅವಕಾಶ ಬಳಸಿಕೊಳ್ಳುವ ಕಾತರದಲ್ಲಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಐರ್ಲೆಂಡ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರೂ ಪಂದ್ಯಗಳಲ್ಲೂ ಭಾರತ ಗೆಲುವಿನ ನಗೆ ಬೀರಿದೆ. ಇಂದೂ ಕೂಡಾ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿತಾ, ತನ್ನ ಗೆಲುವಿನ ದಾಖಲೆಯನ್ನು ಮುಂದುವರೆಸುವ ಯತ್ನದಲ್ಲಿದೆ.

ಏಕೈಕ ಸರಣಿ ಗೆದ್ದಿರುವ ಭಾರತ

ಭಾರತ ಈವರೆಗೆ ಐರ್ಲೆಂಡ್‌ ವಿರುದ್ಧ ಏಕೈಕ ಟಿ20 ಸರಣಿ ಆಡಿದೆ. 2018ರಲ್ಲಿ ಐರ್ಲೆಂಡ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದಿತ್ತು. ಅದಕ್ಕೂ ಮೊದಲು 2009ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲಿ ಟೀಂ ಇಂಡಿಯಾ, ಐರ್ಲೆಂಡ್‌ ವಿರುದ್ಧ ಜಯಗಳಿಸಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌, ಋುತುರಾಜ್ ಗಾಯಕ್ವಾಡ್‌, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ‌(ನಾಯಕ), ದಿನೇಶ್ ಕಾರ್ತಿಕ್‌, ಅಕ್ಷರ್ ಪಟೇಲ್‌, ಹರ್ಷಲ್ ಪಟೇಲ್‌, ಭುವನೇಶ್ವರ್ ಕುಮಾರ್‌, ಆವೇಶ್‌/ಅರ್ಶದೀಪ್‌/ಉಮ್ರಾನ್‌, ಯುಜುವೇಂದ್ರ ಚಹಲ್‌

ಐರ್ಲೆಂಡ್‌: ಪೌಲ್‌ ಸ್ಟಿರ್ಲಿಂಗ್‌, ಬಾಲ್ಬಿರ್ನೀ(ನಾಯಕ), ಡೆಲಾನಿ, ಟೆಕ್ಟರ್‌, ಟಕ್ಕರ್‌, ಕ್ಯಾಂಪರ್‌, ಮೆಕ್‌ಬ್ರೈನ್‌, ಡೊಕ್ರೆಲ್‌, ಮಾರ್ಕ್ ಅಡೈರ್‌, ಮೆಕ್‌ಕಾರ್ತಿ, ಜೋಶುವಾ

ಪಂದ್ಯ ಆರಂಭ: ರಾತ್ರಿ 9 ಗಂಟೆಗೆ(ಭಾರತೀಯ ಕಾಲಮಾನ)

Follow Us:
Download App:
  • android
  • ios