ಅಹಮದಾಬಾದ್(ಮಾ.14)‌: ವಿಶ್ವ ನಂ.1 ಟಿ20 ತಂಡದ ಸಂಘಟಿತ, ಲೆಕ್ಕಾಚಾರದ ಆಟಕ್ಕೆ ನಡುಗಿದ್ದ ಟೀಂ ಇಂಡಿಯಾ ಭಾನುವಾರ ಇಲ್ಲಿನ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದೆ.

3 ತಿಂಗಳ ಬಳಿಕ ಮೊದಲ ಬಾರಿಗೆ ಬಿಳಿ ಚೆಂಡಿನಲ್ಲಿ ಆಡಿದ ಭಾರತ, ಟಿ20 ಮಾದರಿಗೆ ಒಗ್ಗಿಕೊಳ್ಳಲು ತಿಣುಕಾಡಿತು. ಟಿ20 ತಜ್ಞರಾದ ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್‌ ಹಾಗೂ ಯಜುವೇಂದ್ರ ಚಹಲ್‌ ವೈಫಲ್ಯ ಕಂಡರು. ಒಂದು ಸೋಲು ಭಾರತ ತಂಡದ ಉತ್ಸಾಹವನ್ನೇನೂ ಕುಗ್ಗಿಸುವುದಿಲ್ಲ. ಆದರೂ ಇಂಗ್ಲೆಂಡ್‌ನಂತಹ ಬಲಿಷ್ಠ, ಅತ್ಯಂತ ಸಮತೋಲನದಿಂದ ಕೂಡಿರುವ ತಂಡವನ್ನು ಎದುರಿಸುವಾಗ ಸಣ್ಣ ತಪ್ಪು ಸಹ ಸೋಲಿನತ್ತ ತಳ್ಳುತ್ತದೆ ಎನ್ನುವುದು ಟೀಂ ಇಂಡಿಯಾಗೆ ತಿಳಿದಿದೆ. ಈ ನಿಟ್ಟಿನಲ್ಲಿ ಆತಿಥೇಯ ತಂಡ ಸುಧಾರಿತ ಆಟವಾಡಲು ದಾರಿ ಹುಡುಕಿಕೊಳ್ಳಬೇಕಿದೆ.

ರೋಹಿತ್‌ ಶರ್ಮಾ ಈ ಪಂದ್ಯದಲ್ಲೂ ಆಡುವುದು ಅನುಮಾನ. ಶಿಖರ್‌ ಧವನ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಕೆ.ಎಲ್‌.ರಾಹುಲ್‌ ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ನಾಯಕ ವಿರಾಟ್‌ ಕೊಹ್ಲಿ ತಮ್ಮ ಕಳೆದ 5 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 3ರಲ್ಲಿ ಡಕೌಟ್‌ ಆಗಿದ್ದಾರೆ. ಕೊಹ್ಲಿಯ ಬ್ಯಾಟಿಂಗ್‌ ಲಯ ಭಾರತಕ್ಕೆ ತಕ್ಷಣಕ್ಕೆ ತಲೆನೋವಾಗದಿದ್ದರೂ, ಅವರ ಆಟ ಹೀಗೆ ಮುಂದುವರಿದರೆ ಉಳಿದ ಆಟಗಾರರ ಮೇಲೆ ಭಾರೀ ಒತ್ತಡ ಬೀಳಲಿದೆ.

ಶ್ರೇಯಸ್‌ ಅಯ್ಯರ್‌ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದರು ನಿಜ, ಆದರೆ ಅವರಿಂದ ತಂಡ ಮತ್ತಷ್ಟು ಆಕ್ರಮಣಕಾರಿ ಆಟ ನಿರೀಕ್ಷೆ ಮಾಡುತ್ತಿದೆ. ಹೆಚ್ಚು ಬೌಂಡರಿಗಳನ್ನು ಗಳಿಸಲು ಅವರು ಪ್ರಯತ್ನಿಸದೆ ಇರುವುದು ಎದುರಾಳಿಗೆ ಲಾಭವಾಗಲಿದೆ. ಪಂತ್‌, ಪಾಂಡ್ಯ ಮೇಲೆ ಭಾರತ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಇಂಗ್ಲೆಂಡ್‌ನಂತೆ ಭಾರತದ ಅಗ್ರ ನಾಲ್ವರು ಕ್ರೀಸ್‌ಗಿಳಿಯುತ್ತಿದ್ದಂತೆ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸುವುದಿಲ್ಲ. ಹೀಗಾಗಿ, ಸ್ಲಾಗ್‌ ಓವರ್‌ಗಳಲ್ಲಿ ಹೆಚ್ಚು ಎಸೆತಗಳನ್ನು ಎದುರಿಸುವ ಪಂತ್‌ ಹಾಗೂ ಪಾಂಡ್ಯ ಸಾಧ್ಯವಾದಷ್ಟು ಸ್ಫೋಟಕ ಆಟವಾಡಬೇಕಿದೆ.

ಟೆಸ್ಟ್ ಅಬ್ಬರಕ್ಕೆ ಬ್ರೇಕ್; ಟಿ20ಯಲ್ಲಿ ಟೀಂ ಇಂಡಿಯಾಗೆ ಮೊದಲ ಆಘಾತ!

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಅದರಲ್ಲೂ ಪ್ರಮುಖವಾಗಿ ಮಾರ್ಕ್ ವುಡ್‌ ಹಾಗೂ ಜೋಫ್ರಾ ಆರ್ಚರ್‌ ತಮ್ಮ ವೇಗ ಹಾಗೂ ಬೌನ್ಸ್‌ನಿಂದಲೇ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು. ಇದೇ ರಣತಂತ್ರವನ್ನು ಭಾರತ ಬಳಸುವುದಾದರೆ ಈ ಪಂದ್ಯದಲ್ಲಿ ನವ್‌ದೀಪ್‌ ಸೈನಿ ಆಡಬೇಕು. ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ ಅನುಪಸ್ಥಿತಿಯಲ್ಲಿ ಭಾರತದ ವೇಗದ ಬೌಲಿಂಗ್‌ ಪಡೆ ಮೊನಚು ಕಳೆದುಕೊಂಡಂತಿದೆ. ಮೂವರು ಸ್ಪಿನ್ನರ್‌ಗಳನ್ನು ಆಡಿಸಿದರೂ ಹೆಚ್ಚು ಪರಿಣಾಮಕಾರಿಯಾಗದಿರುವುದು ನಾಯಕ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ತಂಡ ಸಂಯೋಜನೆ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ.

ಮತ್ತೊಂದೆಡೆ ಇಂಗ್ಲೆಂಡ್‌ ಸೀಮಿತ ಓವರ್‌ ಮಾದರಿಯಲ್ಲಿ ಸದ್ಯದ ಅತ್ಯಂತ ಬಲಿಷ್ಠ ತಂಡ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇಂಗ್ಲೆಂಡ್‌ ತಂಡವನ್ನು ಸೋಲಿಸಬೇಕಿದ್ದರೆ ಭಾರತವಲ್ಲ ಯಾವುದೇ ತಂಡವಾದರೂ ಶೇ.100ಕ್ಕಿಂತ ಹೆಚ್ಚು ಪರಿಶ್ರಮ ವಹಿಸಬೇಕು. ಇಯಾನ್‌ ಮೊರ್ಗನ್‌ ಪಡೆ ಮತ್ತೊಂದು ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆಯ ಉತ್ಸಾಹ ಕುಗ್ಗಿಸಲು ಕಾಯುತ್ತಿದೆ.

ಪಿಚ್‌ ರಿಪೋರ್ಟ್‌: ಮೊದಲ ಪಂದ್ಯಕ್ಕೆ ಬಳಸಿದ ಪಿಚ್‌ ಈ ಪಂದ್ಯಕ್ಕೆ ಬಳಕೆಯಾಗದಿದ್ದರೂ ಮೊಟೇರಾ ಕ್ರೀಡಾಂಗಣದ ಪಿಚ್‌ಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್‌ ಮೊತ್ತ 140-150 ರನ್‌. ಸಂಜೆ ನಂತರ ಇಬ್ಬನಿ ಬೀಳಲಿದ್ದು, 2ನೇ ಇನ್ನಿಂಗ್ಸ್‌ನಲ್ಲಿ ಬೌಲ್‌ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಬೌಲ್‌ ಮಾಡುವುದು ಖಚಿತ.

ಸಂಭವನೀಯ ತಂಡಗಳು

ಭಾರತ: ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಾರ್ದೂಲ್‌/ನವ್‌ದೀಪ್‌ ಸೈನಿ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌, ಬೆನ್‌ ಸ್ಟೋಕ್ಸ್‌, ಇಯಾನ್‌ ಮೊರ್ಗನ್‌(ನಾಯಕ), ಸ್ಯಾಮ್‌ ಕರ್ರನ್‌, ಜೋಫ್ರಾ ಆರ್ಚರ್‌, ಕ್ರಿಸ್‌ ಜೋರ್ಡನ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌.

ಪಂದ್ಯ ಆರಂಭ: ಸಂಜೆ 7ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್