* ಇನಿಂಗ್ಸ್‌ ಸೋಲಿನ ಭೀತಿಗೆ ಸಿಲುಕಿದ ಟೀಂ ಇಂಡಿಯಾ* ಕೇವಲ 2 ರನ್‌ ಅಂತದಲ್ಲಿ ಮೂರು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ* ಪೆವಿಲಿಯನ್ ಸೇರಿದ ಕೊಹ್ಲಿ, ರಹಾನೆ ಹಾಗೂ ರಿಷಭ್ ಪಂತ್

ಲೀಡ್ಸ್‌(ಆ.28): ಲೀಡ್ಸ್‌ ಟೆಸ್ಟ್‌ನ ಮೂರನೇ ದಿನ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ, ನಾಲ್ಕನೇ ದಿನದಾಟದಲ್ಲಿ ನಾಟಕೀಯ ಕುಸಿತಕಂಡಿದೆ. ಕೇವಲ ಎರಡು ರನ್‌ ಅಂತರದಲ್ಲಿ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರಿಷಭ್ ಪಂತ್ ವಿಕೆಟ್ ಕಳೆದುಕೊಂಡು ಇನಿಂಗ್ಸ್‌ ಸೋಲಿನತ್ತ ಮುಖ ಮಾಡಿದೆ. ಸದ್ಯ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 239 ರನ್‌ ಬಾರಿಸಿದ್ದು, ಇನ್ನೂ 115 ರನ್‌ಗಳ ಹಿನ್ನೆಡೆಯಲ್ಲಿದೆ. 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ನಲ್ಲಿ ವೃತ್ತಿಜೀವನದ 26ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ಎದುರಿನ ಈ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ 50+ ರನ್‌ ಬಾರಿಸುವಲ್ಲಿ ಯಶಸ್ವಿಯಾಗಿದರು. ಬಳಿಕ ಜೋ ರೂಟ್‌ಗೆ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ

Scroll to load tweet…

ಮೂರನೇ ದಿನದಾಟದಂತ್ಯದ ವೇಳೆಗೆ 45 ರನ್‌ ಬಾರಿಸಿದ್ದ ವಿರಾಟ್‌ ಕೊಹ್ಲಿ ಸಾಕಷ್ಟು ಎಚ್ಚರಿಕೆ ಬ್ಯಾಟಿಂಗ್‌ಗೆ ಮೊರೆ ಹೋದರು. ನಾಲ್ಕನೇ ದಿನದಾಟದ ಮೊದಲ 26 ಎಸೆತಗಳನ್ನು ಎದುರಿಸಿ 50ರ ಗಡಿ ದಾಟಿದರು. ಓಲಿ ರಾಬಿನ್‌ಸನ್‌ ಬೌಲಿಂಗ್‌ನಲ್ಲಿ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದೇ ಓವರ್‌ನಲ್ಲಿ ಮತ್ತೊಂದು ಬೌಂಡರಿ ಬಾರಿಸಿದ ಕೊಹ್ಲಿ ಮರು ಎಸೆತದಲ್ಲೇ ಜೋ ರೂಟ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಒಟ್ಟು 125 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿಗಳ ನೆರವಿನಿಂದ 55 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

Ind vs Eng ಲೀಡ್ಸ್‌ ಟೆಸ್ಟ್‌: ಶತಕದ ಹೊಸ್ತಿಲಲ್ಲಿ ಎಡವಿದ ಚೇತೇಶ್ವರ್ ಪೂಜಾರ

ಕೊಹ್ಲಿ ಹಾದಿ ಹಿಡಿದ ರಹಾನೆ-ಪಂತ್: ಇನ್ನು ವಿರಾಟ್ ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಉಪನಾಯಕ ಅಜಿಂಕ್ಯ ರಹಾನೆ ಕೂಡಾ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ರಹಾನೆ 25 ಎಸೆತಗಳಲ್ಲಿ 10 ರನ್‌ ಬಾರಿಸಿ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಪಂತ್ ಕೇವಲ ಒಂದು ರನ್ ಬಾರಿಸಿ ಓಲಿ ರಾಬಿನ್‌ಸನ್‌ಗೆ 4ನೇ ಬಲಿಯಾದರು.

ಧೋನಿ ದಾಖಲೆ ಹಿಂದಿಕ್ಕಿದ ಕೊಹ್ಲಿ: ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. ಹೌದು, ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ಎದುರು 12 ಟೆಸ್ಟ್ ಅರ್ಧಶತಕ ಬಾರಿಸಿದ್ದರು. ಇದೀಗ ಕೊಹ್ಲಿ 13 ಅರ್ಧಶತಕ ಬಾರಿಸುವ ಮೂಲಕ ಧೋನಿ ದಾಖಲೆ ಹಿಂದಿಕ್ಕಿದ್ದಾರೆ. ಇನ್ನು ಇಂಗ್ಲೆಂಡ್ ಎದುರು ಅತಿಹೆಚ್ಚು ಅರ್ಧಶತಕ ಬಾರಿಸಿದ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಹಾಗೂ ಸಚಿನ್‌ ತೆಂಡುಲ್ಕರ್ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಈ ಇಬ್ಬರು ತಲಾ 20 ಅರ್ಧಶತಕ ಬಾರಿಸಿದ್ದಾರೆ. ಆ ಬಳಿಕ ಗುಂಡಪ್ಪ ವಿಶ್ವನಾಥ್(16) ಹಾಗೂ ರಾಹುಲ್‌ ದ್ರಾವಿಡ್(15) ಇದ್ದಾರೆ.