ರಾಜ್‌ಕೋಟ್ ಟೆಸ್ಟ್‌ನಲ್ಲಿ ರೋಹಿತ್ ರಾಜ್ಯಭಾರ; ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ಕ್ಯಾಪ್ಟನ್!
ಇಂಗ್ಲೆಂಡ್ ವಿರುದ್ದ 3ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತದ 5ನೇ ಆರಂಭಿಕ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಜೊತಗೆ ಧೋನಿ ದಾಖಲೆಯೂ ಪುಡಿಯಾಗಿದೆ.
ರಾಜ್‌ಕೋಟ್(ಫೆ.15): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಸೆಂಚುರಿ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಸಮಯೋಚಿತ ಜತೆಯಾಟದ ನೆರವಿನಿಂದ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಪಾರಾಗಿದೆ.
ದಿಢೀರ್ ವಿಕೆಟ್ ಪತನದ ಆಘಾತ ಅನುಭವಿಸಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಜೊತೆಯಾಟ ಕೈಹಿಡಿಯಿತು. ರೋಹಿತ್ ಶರ್ಮಾ ದಿಟ್ಟ ಹೋರಾಟದ ಮೂಲಕ ಸೆಂಚುರಿ ಸಿಡಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 31ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಗರಿಷ್ಠ ಶತಕ ಸಿಡಿಸಿದ 5ನೇ ಬ್ಯಾಟ್ಸ್‌ಮನ್ ದಾಖಲೆ ಬರೆದರು.
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಪತ್ನಿಯ ಕಣ್ಣೀರು ಒರೆಸಿದ ಸರ್ಫರಾಜ್ ಖಾನ್..! ವಿಡಿಯೋ ವೈರಲ್
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯ
ಸುನಿಲ್ ಗವಾಸ್ಕರ್: 4 ಶತಕ
ವಿಜಯ್ ಮರ್ಚೆಂಟ್: 3 ಶತಕ
ಮುರಳಿ ವಿಜಯ್: 3 ಶತಕ
ಕೆಎಲ್ ರಾಹುಲ್: 3 ಶತಕ
ರೋಹಿತ್ ಶರ್ಮಾ: 3 ಶತಕ
ರೋಹಿತ್ ಶರ್ಮಾ ಸೆಂಚುರಿ ಆಟದಲ್ಲಿ 2 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಭಾರತೀಯ ಪಟ್ಟಿಯಲ್ಲಿ ರೋಹಿತ್ 2ನೇ ಸ್ಥಾನಕ್ಕೇರಿದ್ದಾರೆ. 2ನೇ ಸ್ಥಾನದಲ್ಲಿದ್ದ ಧೋನಿ ಇದೀಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್(ಟೀಂ ಇಂಡಿಯಾ)
ವೀರೇಂದ್ರ ಸೆಹ್ವಾಗ್: 90 ಸಿಕ್ಸರ್
ರೋಹಿತ್ ಶರ್ಮಾ: 79 ಸಿಕ್ಸರ್
ಎಂಎಸ್ ಧೋನಿ: 78 ಸಿಕ್ಸರ್
ಹೌದು, ಇಲ್ಲಿನ ನಿರಂಜನ್ ಶಾ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವೈಜಾಗ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವೈಜಾಗ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಶುಭ್‌ಮನ್ ಗಿಲ್ ಶೂನ್ಯ ಸುತ್ತಿದರು. ಇನ್ನು ರಜತ್ ಪಾಟೀದಾರ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಪರಿಣಾಮ ಟೀಂ ಇಂಡಿಯಾ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
ICC ODI Rankings: 5 ವರ್ಷಗಳ ಬಳಿಕ ನಂ.1 ಸ್ಥಾನದಿಂದ ಕೆಳಗಿಳಿದ ಶಕೀಬ್
ರೋಹಿತ್ ಶರ್ಮಾ ಭರ್ಜರಿ ಶತಕ: ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದ ರೋಹಿತ್ ಶರ್ಮಾ, ತಂಡ ಸಂಕಷ್ಟದಲ್ಲಿದ್ದಾಗ ರವೀಂದ್ರ ಜಡೇಜಾ ಜತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವಲ್ಲಿ ಯಶಸ್ವಿಯಾದರು.