* ಲೀಡ್ಸ್‌ ಟೆಸ್ಟ್‌ ಬಳಿಕ ಓವಲ್ ಟೆಸ್ಟ್‌ನಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಫೇಲ್* ಕೊಹ್ಲಿ-ಶಾರ್ದೂಲ್ ಠಾಕೂರ್ ಬಿಟ್ಟು ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯ* ಕೇವಲ 191 ರನ್‌ಗಳಿಗೆ ಸರ್ವಪತನ ಕಂಡ ಟೀಂ ಇಂಡಿಯಾ

ಲಂಡನ್(ಸೆ.03)‌: ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಅದರಲ್ಲೂ ಪ್ರಮುಖವಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ದಯನೀಯ ವೈಫಲ್ಯ ಮುಂದುವರಿದಿದೆ. ಗುರುವಾರದಿಂದ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ಆರಂಭಗೊಂಡ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 191 ರನ್‌ಗಳಿಗೆ ಆಲೌಟ್‌ ಆಯಿತು. ಇನ್ನು ಮೊದಲ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 53 ರನ್‌ ಗಳಿಸಿದೆ. ಇನ್ನೂ ಇಂಗ್ಲೆಂಡ್‌ 138 ರನ್‌ಗಳ ಹಿನ್ನೆಡೆಯಲ್ಲಿದೆ.

ಇಂಗ್ಲೆಂಡ್‌ ವೇಗಿಗಳು ಮತ್ತೊಮ್ಮೆ ಮಾರಕ ದಾಳಿ ಸಂಘಟಿಸಿದರು. ನಾಯಕ ವಿರಾಟ್‌ ಕೊಹ್ಲಿ ಹಾಗೂ ಶಾರ್ದೂಲ್‌ ಠಾಕೂರ್‌ರ ಅರ್ಧಶತಕಗಳ ನೆರವಿನಿಂದ ಭಾರತ ಕಳಪೆ ಮೊತ್ತಕ್ಕೆ ಆಲೌಟ್‌ ಆಗುವುದರಿಂದ ಪಾರಾಯಿತು. ಅಜಿಂಕ್ಯ ರಹಾನೆ, ರಿಷಭ್ ಪಂತ್, ರೋಹಿತ್ ಶರ್ಮಾ, ಪೂಜಾರ ಹಾಗೂ ರಾಹುಲ್‌ ಮತ್ತೊಮ್ಮೆ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ.

Scroll to load tweet…

ಇಂಗ್ಲೆಂಡ್‌ಗೆ ಶಾಕ್ ನೀಡಿದ ಜಸ್ಪ್ರೀತ್ ಬುಮ್ರಾ; 6 ರನ್‌ಗೆ 2 ವಿಕೆಟ್ ಪತನ!

ಟೀಂ ಇಂಡಿಯಾವನ್ನು ಇನ್ನೂರು ರನ್‌ಗಳೊಳಗೆ ಆಲೌಟ್‌ ಮಾಡಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್‌ ನೀಡಿದರು. ಇಂಗ್ಲೆಂಡ್ 6 ರನ್‌ ಗಳಿಸಿದ್ದಾಗ ಆರಂಭಿಕರಿಬ್ಬರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್ನಿಟ್ಟುವಲ್ಲಿ ಬುಮ್ರಾ ಯಶಸ್ವಿಯಾದರು. ಆ ಬಳಿಕ ನಾಯಕ ಜೋ ರೂಟ್‌ ಹಾಗೂ ಡೇವಿಡ್ ಮಲಾನ್ ಉತ್ತಮ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರಣಿಯಲ್ಲಿ ಈಗಾಗಲೇ 500ಕ್ಕೂ ಅಧಿಕ ರನ್ ಬಾರಿಸಿರುವ ಜೋ ರೂಟ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಉಮೇಶ್ ಯಾದವ್‌ ಟೀಂ ಇಂಡಿಯಾ ದಿನದಾಟದ ಕೊನೆಯಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾದರು.