ಚೆನ್ನೈ(ಫೆ.15): ರವಿಚಂದ್ರನ್‌ ಅಶ್ವಿನ್‌ ಬಾರಿಸಿದ ಆಕರ್ಷಕ(106) ಶತಕದ ನೆರವಿನಿಂದ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 286 ರನ್‌ ಬಾರಿಸಿದ್ದು, ಇಂಗ್ಲೆಂಡ್‌ಗೆ ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಬರೋಬ್ಬರಿ 482 ರನ್‌ಗಳ ಕಠಿಣ ಗುರಿ ನೀಡಿದೆ.

ಹೌದು, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಮೊದಲ ಇನಿಂಗ್ಸ್‌ನಲ್ಲಿ ರನ್‌ ಗಳಿಸಲು ಪರದಾಡಿ ಕೇವಲ 134 ರನ್‌ಗಳಿಗೆ ಆಲೌಟ್‌ ಆಗಿದ್ದರೆ, ಇತ್ತ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ತವರಿನಲ್ಲಿ ಅಕ್ಷರಶಃ ಹೀರೋ ಆಗಿ ಮಿಂಚಿದ್ದಾರೆ. ಮೊದಲಿಗೆ ಬೌಲಿಂಗ್‌ನಲ್ಲಿ 5 ವಿಕೆಟ್‌ ಪಡೆದು ಸಂಭ್ರಮಿಸಿದ್ದ ಅಶ್ವಿನ್‌, ಇದೀಗ ಬ್ಯಾಟಿಂಗ್‌ನಲ್ಲಿ ತಮ್ಮ ವೃತ್ತಿಜೀವನದ 5ನೇ ಟೆಸ್ಟ್ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

INDvENG: ಇಂಗ್ಲೆಂಡ್ ವಿರುದ್ಧ ಬೃಹತ್ ಮುನ್ನಡೆ ಪಡೆದ ಟೀಂ ಇಂಡಿಯಾ!

ವಿರಾಟ್ ಕೊಹ್ಲಿ ಜತೆಗೆ 7ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟ ನಿಭಾಯಿಸಿದ್ದ ಅಶ್ವಿನ್‌, ನಾಯಕ ಕೊಹ್ಲಿ ಕೊಹ್ಲಿ ವಿಕೆಟ್ ಪತನದ ಬಳಿಕ ಚುರುಕಿನ ರನ್‌ ಗಳಿಕೆಗೆ ಮುಂದಾದರು. ಕೇವಲ 148 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 106 ರನ್‌ ಬಾರಿಸಿ ಓಲಿ ಸ್ಟೋನ್‌ಗೆ ವಿಕೆಟ್ ಒಪ್ಪಿಸಿದರು. 10ನೇ ವಿಕೆಟ್‌ಗೆ ಮೊಹಮ್ಮದ್ ಸಿರಾಜ್ ಜತೆ ಅಶ್ವಿನ್‌ 49 ರನ್‌ಗಳ ಜತೆಯಾಟ ನಿಭಾಯಿಸಿದರು.

ಇಂಗ್ಲೆಂಡ್ ಪರ ಮೋಯಿನ್ ಅಲಿ ಹಾಗೂ ಜಾಕ್ ಲೀಚ್ ತಲಾ 4 ವಿಕೆಟ್‌ ಪಡೆದರೆ, ಓಲಿ ಸ್ಟೋನ್‌ ಒಂದು ವಿಕೆಟ್‌ ಪಡೆದರು.