* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿ* ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಪಾಕ್ ನಾಯಕ ಬಾಬರ್ ಅಜಂ* ಬಾಬರ್ ಅಜಂ ಅವರ ನಡೆಗೆ ವ್ಯಾಪಕ ಮೆಚ್ಚುಗೆ
ಬೆಂಗಳೂರು(ಜು.15): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೆಲ ವರ್ಷಗಳಿಂದ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಟ್ವೀಟ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ 78 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಕಳೆದೊಂದ ದಶಕದಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆಹಾಕಿದ್ದಾರೆ. ಆದರೆ 2019ರಿಂದೀಚೆಗೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗುತ್ತಲೇ ಬಂದಿದ್ದಾರೆ.
ವಿರಾಟ್ ಕೊಹ್ಲಿ 2019ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಕೊನೆಯ ಬಾರಿಗೆ ಶತಕ ಸಿಡಿಸದ್ದರು. ಇದಾದ ಬಳಿಕ ಕೊಹ್ಲಿ, ಮೂರಂಕಿ ಮೊತ್ತ ದಾಖಲಿಸಲು ಪದೇ ಪದೇ ವಿಫಲವಾಗುತ್ತಿದ್ದಾರೆ. ವಿರಾಟ್ ಕೊಹ್ಲಿ, ಕಳಪೆ ಪ್ರದರ್ಶನದ ಬಗ್ಗೆ ಹಿರಿಯ ಕ್ರಿಕೆಟಿಗರು ವ್ಯಾಪಕ ಟೀಕೆ ವ್ಯಕ್ತವಾಗಿದೆ. ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಯನ್ನು ಆಡುವ ಹನ್ನೊಂದರ ಬಳಗದಿಂದಲೇ ಹೊರಗಿಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೇ, ಮತ್ತೆ ಕೆಲವು ಕ್ರಿಕೆಟಿಗರು, ವಿರಾಟ್ ಕೊಹ್ಲಿ, ದೇಶಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡು, ಅಲ್ಲಿ ಉತ್ತಮ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲಿ ಎನ್ನುವ ಸಲಹೆಯನ್ನು ನೀಡಿದ್ದಾರೆ.
ಆದರೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಟ್ವೀಟ್ ಮಾಡಿ, ಇದೆಲ್ಲಾ ಕಳೆದು ಹೋಗುತ್ತದೆ. ಧೈರ್ಯವಾಗಿರಿ ಎಂದು ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ. ಬಾಬರ್ ಅಜಂ ಅವರ ಈ ಟ್ವೀಟ್ ಭಾರತ ಹಾಗೂ ಪಾಕಿಸ್ತಾನದಲ್ಲಿರುವ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿರಾಟ್ ಕೊಹ್ಲಿಗೆ ನೈತಿಕ ಬೆಂಬಲ ಸೂಚಿಸಿದ ಬಾಬರ್ ಅಜಂ ಅವರ ಬಗ್ಗೆ ಉಭಯ ದೇಶಗಳ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿನ್ನಾಭಿಪ್ರಾಯಗಳಿದ್ದು, ಇದೆಲ್ಲವನ್ನು ಬದಿಗಿಟ್ಟು ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ನಾಯಕ ಬಾಬರ್ ಅಜಂ ಬೆಂಬಲ ಸೂಚಿಸಿದ್ದಾರೆ.
ವಿರಾಟ್ ಕೊಹ್ಲಿಗೆ ಹೃದಯಸ್ಪರ್ಶಿ ಸಂದೇಶ ಕಳಿಸಿದ ಪಾಕ್ ನಾಯಕ ಬಾಬರ್ ಅಜಂ..!
ಬಾಬರ್ ಅಜಂ ಅವರ ಟ್ವೀಟ್ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಹಲವು ಹಿರಿಯ ಮಾಜಿ ಕ್ರಿಕೆಟಿಗರ ಮೆಚ್ಚುಗೆಗೂ ಪಾತ್ರವಾಗಿದೆ. ಇದು ಬಾಬರ್ ಅಜಂ ಅವರ ಪ್ರಬುದ್ಧ ನಡೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.
ಇನ್ನು ಮಲಿಕ್ ಅನಾಸ್ ಅವಾನ್ ಎನ್ನುವವರು, ಬಾರ್ಡರ್‌ಗಳಿಂದ ಬೇರೆಯಾದವರನ್ನು ಕ್ರಿಕೆಟ್ ಒಂದು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಹಲವು ಅಭಿಮಾನಿಗಳು ಬಾಬರ್ ಅಜಂ ಅವರ ಟ್ವೀಟ್ ಮೆಚ್ಚಿಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದ ಸೋಲಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಅವರೊಬ್ಬ ದಿಗ್ಗಜ ಬ್ಯಾಟರ್ ಆಗಿದ್ದು, ಅವರಿಗೆ ಅಭದ್ರತೆ ಕಾಡುತ್ತಿಲ್ಲ. ನಾನು ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿಯೂ ಇದೇ ಮಾತನ್ನು ಪುನರುಚ್ಚರಿಸಿದ್ದೇನೆ. ಫಾರ್ಮ್ ಎನ್ನುವುದು ಯಾವಾಗಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ ಹಾಗೂ ಪ್ರತಿ ಆಟಗಾರನ ಪಾಲಿಗೂ ಏಳು-ಬೀಳು ಸಹಜ. ವಿರಾಟ್ ಕೊಹ್ಲಿಯಂತಹ ಆಟಗಾರರು ಹಲವು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದು, ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಯಂತಹ ಆಟಗಾರರು ಫಾರ್ಮ್‌ಗೆ ಮರಳಲು ಕೇವಲ ಒಂದೆರಡು ಪಂದ್ಯಗಳು ಸಾಕು. ನಾನು ಕೊಹ್ಲಿ ಬಗ್ಗೆ ಈ ರೀತಿ ಯೋಚಿಸುತ್ತಿದ್ದೇನೆ. ಕ್ರಿಕೆಟ್‌ನ್ನು ಯಾರೆಲ್ಲಾ ಫಾಲೋ ಮಾಡುತ್ತಿದ್ದಾರೋ ಅವರೆಲ್ಲರೂ ಸಹಾ ನನ್ನ ರೀತಿಯೇ ಯೋಚಿಸುತ್ತಿದ್ದಾರೆ ಎಂದುಕೊಂಡಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದರು.
