Asianet Suvarna News Asianet Suvarna News

Ind vs Eng ಇಂದಿನಿಂದ ಟೀಂ ಇಂಡಿಯಾಗೆ ಇಂಗ್ಲೆಂಡ್ ಟಿ20 ಚಾಲೆಂಜ್..!

* ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯಕ್ಕೆ ಕ್ಷಣಗಣನೆ
* ರೋಹಿತ್ ಶರ್ಮಾ ಪಡೆಗೆ ಶಾಕ್ ನೀಡಲು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್
* ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಪಾಲಿಗೆ ಮಹತ್ವದ ಸರಣಿ

Ind vs Eng Rohit Sharma led Team India take on England at Southampton kvn
Author
Bengaluru, First Published Jul 7, 2022, 11:40 AM IST

ಸೌಥಾಂಪ್ಟನ್(ಜು.07)‌: ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು, ಟೀಂ ಇಂಡಿಯಾ ಪ್ರಯೋಗಗಳನ್ನು ಬದಿಗಿಟ್ಟು ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸ ಆರಂಭಿಸಲಿದೆ. ಆ ಕೆಲಸ ಗುರುವಾರದಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಶುರುವಾಗಲಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 15 ಟಿ20 ಪಂದ್ಯಗಳು ಸಿಗಲಿದ್ದು, ಪ್ರತಿ ಪಾತ್ರಕ್ಕೂ ಸರಿಯಾದ ಆಟಗಾರರನ್ನು ಆಯ್ಕೆ ಮಾಡಲು ಪಂದ್ಯಗಳನ್ನು ಬಳಸಿಕೊಳ್ಳಬೇಕಿದೆ.

ಮರುನಿಗದಿತ 5ನೇ ಟೆಸ್ಟ್‌ನಲ್ಲಿ ಸೋತ ಭಾರತಕ್ಕೆ ಟಿ20ಯಲ್ಲೂ ಭಾರೀ ಸವಾಲು ಎದುರಾಗಲಿದೆ. ಇಂಗ್ಲೆಂಡ್‌ ಅತ್ಯುತ್ತಮ ಲಯದಲ್ಲಿದ್ದು, ಭಾರತೀಯರ ಮೇಲೆ ಮತ್ತೆ ಸವಾರಿ ಮಾಡಲು ಕಾಯುತ್ತಿದೆ. ಹೊಸದಾಗಿ ನಾಯಕನ ಪಟ್ಟ ಅಲಂಕರಿಸಿರುವ ಜೋಸ್ ಬಟ್ಲರ್‌ (Jos Buttler) ತಮ್ಮ ತಂಡವನ್ನು ವಿಶ್ವಕಪ್‌ಗೆ ಸಿದ್ಧಗೊಳಿಸಲು ಎದುರು ನೋಡುತ್ತಿದ್ದಾರೆ. ಕೋವಿಡ್‌ನಿಂದಾಗಿ ಟೆಸ್ಟ್‌ ಪಂದ್ಯ ತಪ್ಪಿಸಿಕೊಂಡಿದ್ದ ರೋಹಿತ್‌ ಶರ್ಮಾ (Rohit Sharma) ಟಿ20 ಸರಣಿಯನ್ನು ಆಡುವ ನಿರೀಕ್ಷೆಯಲ್ಲಿದ್ದು, ಭಾರತದ ಆತ್ಮವಿಶ್ವಾಸ ಹೆಚ್ಚಿಸಲಿದೆ.

ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್‌ (Rishabh Pant), ಜಸ್ಪ್ರೀತ್ ಬುಮ್ರಾ (Jasprit Bumrah), ರವೀಂದ್ರ ಜಡೇಜಾ (Ravindra Jadeja) ಮತ್ತು ಶ್ರೇಯಸ್‌ ಅಯ್ಯರ್‌ (Shareyas Iyer) ಮೊದಲ ಟಿ20ಗೆ ವಿಶ್ರಾಂತಿ ಪಡೆಯಲಿದ್ದು, 2ನೇ ಪಂದ್ಯದಿಂದ ತಂಡ ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್‌ (Sanju Samson), ಇಶಾನ್‌ ಕಿಶನ್‌ಗೆ (Ishan Kishan) ಮತ್ತೊಂದು ಅವಕಾಶ ಸಿಗಬಹುದು. ಐರ್ಲೆಂಡ್‌ ವಿರುದ್ಧ ಮಿಂಚಿದ ದೀಪಕ್‌ ಹೂಡಾ (Deepak Hooda) ಆಡುವ ಹನ್ನೊಂದರಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಸೂರ್ಯಕುಮಾರ್‌ ಮೇಲೂ ತಂಡ ದೊಡ್ಡ ನಿರೀಕ್ಷೆ ಇರಿಸಿದೆ. ಬೌಲಿಂಗ್‌ ವಿಭಾಗದಲ್ಲಿ ಉಮ್ರಾನ್‌ ಮಲಿಕ್‌ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದರೂ ಅವರ ಆಟ ಸಾಕಷ್ಟು ಸುಧಾರಿಸಬೇಕಿದೆ. ಐರ್ಲೆಂಡ್‌ ವಿರುದ್ಧ ದುಬಾರಿಯಾಗಿದ್ದ ಭುವನೇಶ್ವರ್‌ ಮತ್ತು ಹರ್ಷಲ್‌ ಮೇಲೆ ಒತ್ತಡವಿದೆ. ಚಹಲ್‌ ಮತ್ತೊಮ್ಮೆ ಟ್ರಂಪ್‌ ಕಾರ್ಡ್‌ ಎನಿಸಲಿದ್ದಾರೆ.

ಭಾರತ ಎದುರಿನ ಟಿ20 ಸರಣಿಗೆ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ ಮತ್ತು ಜಾನಿ ಬೇರ್‌ಸ್ಟೋವ್‌ಗೆ ವಿಶ್ರಾಂತಿ ನೀಡಿದ್ದರೂ ಇಂಗ್ಲೆಂಡ್‌ ಬಲಿಷ್ಠ ಆಟಗಾರರನ್ನು ಹೊಂದಿದೆ. ಲಿಯಾಮ್ ಲಿವಿಂಗ್‌ಸ್ಟೋನ್‌, ಸ್ಯಾಮ್‌ ಕರ್ರನ್‌, ಮೋಯಿನ್ ಅಲಿ, ಜೇಸನ್ ರಾಯ್‌, ಡೇವಿಡ್ ಮಲಾನ್‌ರಂತಹ ಅನುಭವಿ ಆಟಗಾರರ ಬಲವಿದೆ.

ರಿಷಭ್ ಪಂತ್ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಲಿ ಎಂದ ಮಾಜಿ ಕ್ರಿಕೆಟಿಗ..!

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ ಕೊಂಚ ಮೇಲುಗೈ ಸಾಧಿಸಿದೆ. 19 ಪಂದ್ಯಗಳ ಪೈಕಿ ಭಾರತ ತಂಡವು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಬಲಿಷ್ಠ ಇಂಗ್ಲೆಂಡ್ ತಂಡವು 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಪಿಚ್‌ ರಿಪೋರ್ಚ್‌

ರೋಸ್‌ ಬೌಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ನಿರೀಕ್ಷಿಸಬಹುದು. ಹಿಂದಿನ ದಾಖಲೆಗಳನ್ನು ನೋಡಿದಾಗ ವಾತಾವರಣ ಸಹಕಾರಿಯಾಗಿದ್ದರೆ ಮಾತ್ರ ವೇಗಿಗಳು ಪರಿಣಾಮಕಾರಿಯಾಗಬಲ್ಲರು ಎನ್ನುವುದು ಸ್ಪಷ್ಟವಾಗುತ್ತದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಇಶಾನ್ ಕಿಶನ್‌, ದೀಪಕ್ ಹೂಡಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ‌, ದಿನೇಶ್ ಕಾರ್ತಿಕ್‌, ಹರ್ಷಲ್ ಪಟೇಲ್‌, ಭುವನೇಶ್ವರ್ ಕುಮಾರ್‌, ಯುಜುವೇಂದ್ರ ಚಹಲ್‌, ಉಮ್ರಾನ್ ಮಲಿಕ್‌.

ಇಂಗ್ಲೆಂಡ್‌: ಜೋಸ್ ಬಟ್ಲರ್‌(ನಾಯಕ), ಜೇಸನ್ ರಾಯ್‌, ಡೇವಿಡ್ ಮಲಾನ್‌, ಮೋಯಿನ್‌ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್‌, ಸ್ಯಾಮ್ ಕರ್ರನ್‌, ಕ್ರಿಸ್ ಜೋರ್ಡನ್‌, ಡೇವಿಡ್ ವಿಲ್ಲಿ, ರೀಸೆ ಟಾಪ್ಲೆ, ಟೈಮಲ್ ಮಿಲ್ಸ್‌, ಮ್ಯಾಥ್ಯೂ ಪಾರ್ಕಿನ್‌ಸನ್‌.

ಸ್ಥಳ: ಸೌಥಾಂಪ್ಟನ್‌ 
ಪಂದ್ಯ ಆರಂಭ: ರಾತ್ರಿ 10.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

Follow Us:
Download App:
  • android
  • ios