ಅಹಮದಾಬಾದ್(ಫೆ.24)‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಫೈನಲ್‌ಗೇರಲು ಪೈಪೋಟಿ ಕೊನೆ ಹಂತ ತಲುಪಿದ್ದು, ಬುಧವಾರದಿಂದ ಇಲ್ಲಿನ ಮೊಟೇರಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಎರಡೂ ತಂಡಗಳ ಪಾಲಿಗೆ ನಿರ್ಣಾಯಕ ಎನಿಸಿದೆ. ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ.

4 ಪಂದ್ಯಗಳ ಸರಣಿಯನ್ನು ಭಾರತ ಕನಿಷ್ಠ 2-1ರಲ್ಲಿ ಗೆಲ್ಲಬೇಕಿದೆ. ಇಂಗ್ಲೆಂಡ್‌ 3-1ರಲ್ಲಿ ಜಯಿಸಿದರೆ ಮಾತ್ರ ಫೈನಲ್‌ಗೆ ಪ್ರವೇಶ ಸಿಗಲಿದೆ. ಸದ್ಯ 1-1ರಲ್ಲಿ ಸರಣಿ ಸಮಗೊಂಡಿದ್ದು, ಈ ಪಂದ್ಯ ಡ್ರಾ ಆದರೆ ಭಾರತಕ್ಕೆ ಕೊನೆಯ ಅವಕಾಶವೊಂದು ಇರಲಿದೆ. ಆದರೆ ಇಂಗ್ಲೆಂಡ್‌ ಫೈನಲ್‌ ಕನಸು ಭಗ್ನಗೊಳ್ಳಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ, ಕೊನೆಯ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿದೆ. ಒಂದೊಮ್ಮೆ ಸೋತರೆ, ಆಗ ಆಸ್ಪ್ರೇಲಿಯಾ ಫೈನಲ್‌ಗೇರಲಿದೆ.

8 ವರ್ಷಗಳ ಬಳಿಕ ಟೆಸ್ಟ್‌: ನವೀಕರಣಗೊಂಡಿರುವ ಮೊಟೇರಾ ಕ್ರೀಡಾಂಗಣದಲ್ಲಿ ಕೊನೆ ಬಾರಿಗೆ ಟೆಸ್ಟ್‌ ನಡೆದಿದ್ದು 2012ರಲ್ಲಿ. ಅದೂ ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧವೇ ಎನ್ನುವುದು ವಿಶೇಷ. ಆ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ದ್ವಿಶತಕ ಬಾರಿಸಿದ್ದರು. ಭಾರತ 9 ವಿಕೆಟ್‌ಗಳಿಂದ ಜಯಿಸಿತ್ತು. ಮತ್ತೊಮ್ಮೆ ಭರ್ಜರಿ ಪ್ರದರ್ಶನ ತೋರುವ ವಿಶ್ವಾಸ ವಿರಾಟ್‌ ಕೊಹ್ಲಿ ಪಡೆಯದ್ದಾಗಿದೆ.

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಮೊಟೇರಾ ಮೈದಾನದ ಇಂಟ್ರೆಸ್ಟಿಂಗ್‌ ಸಂಗತಿಗಳು...!

ಭಾರತ ತಂಡದಲ್ಲಿ 3 ವೇಗಿಗಳು?: ಪಿಂಕ್‌ ಬಾಲ್‌ ಪಂದ್ಯವಾಗಿರುವ ಕಾರಣ ವೇಗಿಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಅಲ್ಲದೇ ಪಿಚ್‌ ಮೇಲೆ ಹುಲ್ಲು ಬಿಡಲಾಗಿದ್ದು, ಭಾರತ ಮೂವರು ವೇಗಿಗಳನ್ನು ಆಡಿಸಲು ನಿರ್ಧರಿಸಿದರೆ ಅಚ್ಚರಿಯಿಲ್ಲ. ಜಸ್‌ಪ್ರೀತ್‌ ಬುಮ್ರಾ ತಂಡಕ್ಕೆ ವಾಪಸಾಗಲಿದ್ದಾರೆ. ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ರನ್ನು ತಂಡ ಕೈಬಿಡುವುದು ಬಹುತೇಕ ಖಚಿತ. ಉಮೇಶ್‌ ಯಾದವ್‌ ಹಾಗೂ ಮೊಹಮದ್‌ ಸಿರಾಜ್‌ ನಡುವೆ 3ನೇ ವೇಗಿಯ ಸ್ಥಾನಕ್ಕೆ ಪೈಪೋಟಿ ಇದೆ. ಇನ್ನು ಇಶಾಂತ್‌ ಶರ್ಮಾ 100ನೇ ಟೆಸ್ಟ್‌ ಆಡುವ ಉತ್ಸಾಹದಲ್ಲಿದ್ದಾರೆ. ಆರ್‌.ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ಸ್ಪಿನ್ನರ್‌ಗಳಾಗಿ ಮುಂದುವರಿಯಲಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲೂ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ.

ಮತ್ತೊಂದೆಡೆ ಇಂಗ್ಲೆಂಡ್‌ ತಂಡದಲ್ಲೂ ಹಲವು ಬದಲಾವಣೆ ನಿರೀಕ್ಷಿಸಲಾಗಿದೆ. ಜೇಮ್ಸ್‌ ಆ್ಯಂಡರ್‌ಸನ್‌, ಜಾನಿ ಬೇರ್‌ಸ್ಟೋವ್‌ ಹಾಗೂ ಜೋಫ್ರಾ ಆರ್ಚರ್‌ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲಿದ್ದಾರೆ. ಇಂಗ್ಲೆಂಡ್‌ ಕೇವಲ ಒಬ್ಬ ಸ್ಪಿನ್ನರ್‌ನೊಂದಿಗೆ ಆಡಬಹುದು. ಜ್ಯಾಕ್‌ ಕ್ರಾಲಿ ಅಗ್ರ ಕ್ರಮಾಂಕದಲ್ಲಿ ರೋರಿ ಬರ್ನ್ಸ್‌ ಬದಲಿಗೆ ಆಡುವ ಬಗ್ಗೆ ಇಂಗ್ಲೆಂಡ್‌ ತಂಡ ಸುಳಿವು ನೀಡಿದೆ.

ಕ್ರೀಡಾಂಗಣಕ್ಕೆ 55000 ಪ್ರೇಕ್ಷಕರು!

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಮೊಟೇರಾದ ಒಟ್ಟು ಆಸನ ಸಾಮರ್ಥ್ಯ 1 ಲಕ್ಷದ 10 ಸಾವಿರವಾಗಿದ್ದು, ಕೋವಿಡ್‌ ಮಾರ್ಗಸೂಚಿ ಪ್ರಕಾರ ಶೇ.50ರಷ್ಟುಪ್ರೇಕ್ಷಕರಿಗೆ ಅಂದರೆ 55000 ಮಂದಿಗೆ ಪ್ರವೇಶ ಸಿಗಲಿದೆ. ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಮೈಲಿಗಲ್ಲುಗಳ ಮೈದಾನ ಅಹಮದಾಬಾದ್‌ನ ಮೊಟೇರಾ!

1986-87ರಲ್ಲಿ ಪಾಕಿಸ್ತಾನ ವಿರುದ್ಧ ಸುನಿಲ್‌ ಗವಾಸ್ಕರ್‌ ಮೊಟೇರಾ ಕ್ರೀಡಾಂಗಣದಲ್ಲಿ ಟೆಸ್ಟ್‌ನಲ್ಲಿ 10000 ರನ್‌ ಪೂರೈಸಿದ್ದರು. ನ್ಯೂಜಿಲೆಂಡ್‌ನ ಸರ್‌ ರಿಚರ್ಡ್‌ ಹ್ಯಾಡ್ಲಿ ಅವರ 431 ವಿಕೆಟ್‌ಗಳ ದಾಖಲೆಯನ್ನು ಕಪಿಲ್‌ ದೇವ್‌ ಮುರಿದಿದ್ದು ಇದೇ ಕ್ರೀಡಾಂಗಣದಲ್ಲಿ. 1999ರ ಅಕ್ಟೋಬರ್‌ನಲ್ಲಿ ಸಚಿನ್‌ ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದರು. 2011ರ ವಿಶ್ವಕಪ್‌ನ ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್‌, ಏಕದಿನದಲ್ಲಿ 18000 ರನ್‌ ಪೂರೈಸಿದ್ದು ಇದೇ ಕ್ರೀಡಾಂಗಣದಲ್ಲಿ.

ರಾಷ್ಟ್ರಪತಿ ಕೋವಿಂದ್‌ರಿಂದ ಕ್ರೀಡಾಂಗಣ ಉದ್ಘಾಟನೆ

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಮೊಟೇರಾವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಕ್ರೀಡಾಂಗಣ 63 ಎಕರೆ ಪ್ರದೇಶದಲ್ಲಿದ್ದು, 1.1 ಲಕ್ಷ ಆಸನ ಸಾಮರ್ಥ್ಯ ಹೊಂದಿದೆ. ಈ ವರೆಗೂ ಆಸ್ಪ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ (ಎಂಸಿಜಿ) 90,000 ಸಾಮರ್ಥ್ಯದೊಂದಿಗೆ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿತ್ತು. ಮೊಟೇರಾದಲ್ಲಿ ಒಟ್ಟು 4 ಪೆವಿಲಿಯನ್‌ಗಳಿದ್ದು, ಅತ್ಯುತ್ತಮ ಗುಣಮಟ್ಟದ ಜಿಮ್‌, ಒಲಿಂಪಿಕ್‌ ಗುಣಮಟ್ಟದ ಈಜುಕೊಳವಿದೆ. ಮೈದಾನದಲ್ಲಿ ಒಟ್ಟು 11 ಪಿಚ್‌ಗಳಿದ್ದು, ಇದರಲ್ಲಿ 6 ಕೆಂಪು ಮಣ್ಣು, 5 ಕಪ್ಪು ಮಣ್ಣಿನ ಪಿಚ್‌ಗಳಾಗಿವೆ. ಎರಡು ಬಣ್ಣದ ಪಿಚ್‌ಗಳನ್ನು ಹೊಂದಿರುವ ಮೊದಲ ಕ್ರೀಡಾಂಗಣ ಇದಾಗಿದೆ. ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು ಹೊಂದಿರುವ ಕ್ರೀಡಾಂಗಣ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ. ಮಳೆ ಬಂದು ನಿಂತ ಮೇಲೆ ಕೇವಲ 30 ನಿಮಿಷಗಳಲ್ಲಿ ಪಿಚ್‌ ಒಣಿಗಿಸುವ ತಂತ್ರಜ್ಞಾನ ಬಳಸಲಾಗುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಸಂಭವನೀಯ ತಂಡಗಳು

ಭಾರತ: ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಇಶಾಂತ್‌ ಶರ್ಮಾ, ಉಮೇಶ್‌/ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಡಾಮ್‌ ಸಿಬ್ಲಿ, ಜ್ಯಾಕ್‌ ಕ್ರಾಲಿ, ಜಾನಿ ಬೇರ್‌ಸ್ಟೋವ್‌, ಜೋ ರೂಟ್‌(ನಾಯಕ), ಬೆನ್‌ ಸ್ಟೋಕ್ಸ್‌, ಓಲಿ ಪೋಪ್‌, ಬೆನ್‌ ಫೋಕ್ಸ್‌, ಡಾಮ್‌ ಬೆಸ್‌/ಕ್ರಿಸ್‌ ವೋಕ್ಸ್‌, ಜೋಫ್ರಾ ಆರ್ಚರ್‌, ಜ್ಯಾಕ್‌ ಲೀಚ್‌, ಜೇಮ್ಸ್‌ ಆ್ಯಂಡರ್‌ಸನ್‌.

ಪಿಚ್‌ ರಿಪೋರ್ಟ್‌

ಮೊಟೇರಾ ಪಿಚ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಹುಲ್ಲಿದ್ದು, ಸ್ಪಿನ್ನರ್‌ಗಳು ತಡವಾಗಿ ದೊಡ್ಡ ಮಟ್ಟದ ನೆರವು ಪಡೆದುಕೊಳ್ಳಲಿದ್ದಾರೆ. ಹೊಸ ಚೆಂಡು ಹಾಗೂ ವೇಗಿಗಳು ಪಂದ್ಯದ ಮೇಲೆ ಬೀರುವ ಪ್ರಭಾವವನ್ನು ಕಡೆಗಣಿಸುವ ಹಾಗಿಲ್ಲ. ದಿನದಾಟದ ಕೊನೆ ಅವಧಿ ವೇಳೆ ಇಬ್ಬನಿ ಬೀಳಲಿದ್ದು, ಈ ಸಮಯದಲ್ಲಿ ಬೌಲರ್‌ಗಳಿಗೆ ಸವಾಲು ಎದುರಾಗಲಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಬಹುದು ಎಂದು ಅಂದಾಜಿಸಲಾಗಿದೆ.