* ಟೀಂ ಇಂಡಿಯಾ ಎದುರು ಇಂಗ್ಲೆಂಡ್ ಕೊಂಚ ಮೇಲುಗೈ* 2ನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಇಂಗ್ಲೆಂಡ್‌ಗೆ 104 ರನ್‌ಗಳ ಮುನ್ನಡೆ* ಮೊದಲ ಇನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ

ಲೀಡ್ಸ್‌(ಆ.26): ಪ್ರವಾಸಿ ಭಾರತದೆದುರು ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದ್ದ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್‌ ತಂಡವು ಎರಡನೇ ದಿನದಾಟದ ಆರಂಭದಲ್ಲೂ ತನ್ನ ಬಿಗಿಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 182 ರನ್‌ ಬಾರಿಸಿದ್ದು, ಒಟ್ಟಾರೆ 104 ರನ್‌ಗಳ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾವನ್ನು ಕೇವಲ 78 ರನ್‌ಗಳಿಗೆ ಆಲೌಟ್‌ ಮಾಡಿದ್ದ ಇಂಗ್ಲೆಂಡ್‌, ಬ್ಯಾಟಿಂಗ್‌ನಲ್ಲೂ ಉತ್ತಮ ಆರಂಭ ಪಡೆದಿತ್ತು. ಮೊದಲ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 120 ರನ್ ಬಾರಿಸುವ ಮೂಲಕ ಮೊದಲ ದಿನವೇ 42 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ದಿನದಾಟವನ್ನು ಇಂಗ್ಲೆಂಡ್ ತಂಡವು ಎಚ್ಚರಿಕೆಯಿಂದ ಆರಂಭಿಸಿತು. ಆದರೆ ವೇಗಿ ಶಮಿ ಇಂಗ್ಲೆಂಡ್ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತನ್ನ ಖಾತೆಗೆ ಕೇವಲ 15 ರನ್ ಸೇರಿಸಿದ್ದಾಗ ರೋರಿ ಬರ್ನ್ಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಬರ್ನ್ಸ್‌ 153 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 61 ರನ್‌ ಬಾರಿಸಿದರು.

Ind vs Eng ಲೀಡ್ಸ್‌ ಟೆಸ್ಟ್‌ನಲ್ಲಿ ಬೃಹತ್ ಮೊತ್ತದ ಕನವರಿಕೆಯಲ್ಲಿ ಇಂಗ್ಲೆಂಡ್‌

Scroll to load tweet…

ಇನ್ನು ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ವಿಕೆಟ್ ಕಬಳಿಸಲು ಪರದಾಡಿದ್ದ ಜಡೇಜಾ ಕೊನೆಗೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 195 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 68 ರನ್‌ ಬಾರಿಸಿ ಮುನ್ನುಗ್ಗುತ್ತಿದ್ದ ಮತ್ತೋರ್ವ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. 

ಸದ್ಯ ಡೇವಿಡ್‌ ಮಲಾನ್‌(27) ಹಾಗೂ ನಾಯಕ ಜೋ ರೂಟ್‌(14) ಮೂರನೇ ವಿಕೆಟ್‌ಗೆ ಮುರಿಯದ 23 ರನ್‌ಗಳ ಜತೆಯಾಟವಾಡುವ ಮೂಲಕ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಈ ಜೋಡಿಯನ್ನು ಆದಷ್ಟು ಬೇಗ ಟೀಂ ಇಂಡಿಯಾ ಬೌಲರ್‌ಗಳು ಬೇರ್ಪಡಿಸಿದರೆ, ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ.