* ಲೀಡ್ಸ್‌ ಟೆಸ್ಟ್‌ನಲ್ಲಿ ಸಂಕಷ್ಟದ ಸುಳಿಯಲ್ಲಿ ಟೀಂ ಇಂಡಿಯಾ* ಬೃಹತ್ ಮೊತ್ತದತ್ತ ಚಿತ್ತ ನೆಟ್ಟಿರುವ ಜೋ ರೂಟ್ ಪಡೆ* ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 78 ರನ್‌ಗಳಿಗೆ ಆಲೌಟ್

ಲೀಡ್ಸ್(ಆ.26)‌: ಲಾರ್ಡ್ಸ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ದಯನೀಯ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗೆ ಆಲೌಟ್‌ ಆಗಿದೆ. ಆರಂಭಿಕರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನ ಮೊದಲ ದಿನದಾಟದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 120 ರನ್‌ ಬಾರಿಸಿದ್ದು, ಒಟ್ಟಾರೆ 42 ರನ್‌ಗಳ ಮುನ್ನಡೆ ಸಾಧಿಸಿ, ಬೃಹತ್‌ ಮೊತ್ತದ ಮೇಲೆ ಕಣ್ಣಿಟ್ಟಿದೆ.

ಅಪರೂಪಕ್ಕೆ ಟಾಸ್‌ ಗೆದ್ದ ಭಾರತದ ನಾಯಕ ವಿರಾಟ್‌ ಕೊಹ್ಲಿ, ಆತ್ಮವಿಶ್ವಾಸದಿಂದ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಆದರೆ ಅವರ ಲೆಕ್ಕಾಚಾರವನ್ನು ಇಂಗ್ಲೆಂಡ್‌ನ 39 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ತಲೆಕೆಳಗಾಗಿಸಿದರು. 40.4 ಓವರಲ್ಲಿ ಭಾರತ ಆಲೌಟ್‌ ಆಯಿತು. ಆ್ಯಂಡರ್‌ಸನ್‌ ಭಾರತೀಯ ಇನ್ನಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರೆ, ಕ್ರೇಗ್‌ ಓವರ್ಟನ್‌ ಮಂಗಳ ಹಾಡಿದರು. 22 ರನ್‌ಗೆ ಭಾರತ ಕೊನೆಯ 6 ವಿಕೆಟ್‌ ಕಳೆದುಕೊಂಡಿತು.

Scroll to load tweet…

1974ರ ಬಳಿಕ ಅತ್ಯಲ್ಪ ಮೊತ್ತಕ್ಕೆ ಟೀಂ ಇಂಡಿಯಾ ಆಲೌಟ್; ಕೊಹ್ಲಿ ಸೈನ್ಯಕ್ಕೆ ಭಾರಿ ಮುಖಭಂಗ!

ಉತ್ತಮ ಆರಂಭ: ವೇಗದ ಬೌಲರ್‌ಗಳಿಗೆ ಅನುಕೂಲಕರ ವಾತಾವರಣವಿದ್ದ ಕಾರಣ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೂ ರನ್‌ ಗಳಿಸುವುದು ಕಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆರಂಭಿಕರಾದ ರೋರಿ ಬರ್ನ್ಸ್‌ ಹಾಗೂ ಹಸೀಬ್‌ ಹಮೀದ್‌ ಮೊದಲ ವಿಕೆಟ್‌ಗೆ ಮುರಿಯದ ಶತಕದ ಜತೆಯಾಟವಾಡುವ ಮೂಲಕ ಭಾರತೀಯ ವೇಗಿಗಳನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ರೋರಿ ಬರ್ನ್ಸ್‌ 52 ಹಾಗೂ ಹಸೀಬ್ ಹಮೀದ್‌ 60 ರನ್‌ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ಕಾಡುತ್ತಿದೆ 2014ರ ನೆನಪು!

ಟೀಂ ಇಂಡಿಯಾ 2014ರ ಪ್ರವಾಸದಲ್ಲೂ ಇದೇ ಸ್ಥಿತಿಯಲ್ಲಿತ್ತು. ಆಗ ಮೊದಲ ಪಂದ್ಯ ಡ್ರಾ ಆಗಿತ್ತು. 2ನೇ ಪಂದ್ಯವನ್ನು ಭಾರತ ಗೆದ್ದಿತ್ತು. ನಂತರದ 3 ಪಂದ್ಯಗಳನ್ನು ಇಂಗ್ಲೆಂಡ್‌ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಈ ಸಲವೂ ಮೊದಲ ಪಂದ್ಯ ಡ್ರಾ ಆಗಿದೆ. 2ನೇ ಪಂದ್ಯವನ್ನು ಭಾರತ ಗೆದ್ದಿದೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆಯ ಪ್ರದರ್ಶನ 2014ರ ಫಲಿತಾಂಶ ಮರುಕಳಿಸುವಂತೆ ಮಾಡುತ್ತದೆಯೇ ಎನ್ನುವ ಆತಂಕ ಮೂಡಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌: ಟೀಂ ಇಂಡಿಯಾ ಎಡವಟ್ಟು?

ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು ತಪ್ಪು ನಿರ್ಧಾರ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ. ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಡಿಂಗ್ಲಿ ಕ್ರೀಡಾಂಗಣದಲ್ಲಿ ಮೊದಲ ದಿನ ವೇಗದ ಬೌಲಿಂಗ್‌ಗೆ ಅನುಕೂಲಕರ ವಾತಾವರಣವಿರಲಿದೆ. 3ನೇ ದಿನದ ಬಳಿಕ ವೇಗಿಗಳಿಗೆ ನೆರವು ಸಿಗುವುದಿಲ್ಲ. ಬ್ಯಾಟಿಂಗ್‌ ಸುಲಭವಾಗಲಿದೆ ಎಂದು ಬ್ರಾಡ್‌ ಟ್ವೀಟ್‌ ಮಾಡಿದ್ದಾರೆ.