Asianet Suvarna News Asianet Suvarna News

Ind vs Eng ಬೇರ್‌ಸ್ಟೋವ್, ರೂಟ್‌ ದಾಳಿಗೆ ದಾರಿ ತಪ್ಪಿದ ಟೀಂ ಇಂಡಿಯಾ..!

ಬರ್ಮಿಂಗ್‌ಹ್ಯಾಮ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಭರ್ಜರಿ ಜಯ
ಭಾರತ ಎದುರು 7 ವಿಕೆಟ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ
5 ಪಂದ್ಯಗಳ ಟೆಸ್ಟ್ ಸರಣಿಯು 2-2ರಲ್ಲಿ ಸಮಬಲ

Ind vs Eng Joe Root Jonny Bairstow Century guides England win 7 wickets against India in Birmingham Test kvn
Author
Bengaluru, First Published Jul 5, 2022, 4:38 PM IST

ಬರ್ಮಿಂಗ್‌ಹ್ಯಾಮ್(ಜು.05): ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಹಾಗೂ ಜಾನಿ ಬೇರ್‌ಸ್ಟೋವ್ ಆಕರ್ಷಕ ದ್ವಿಶತಕದ ಜತೆಯಾಟಕ್ಕೆ ತತ್ತರಿಸಿದ ಟೀಂ ಇಂಡಿಯಾ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ. ಕೋವಿಡ್‌ನಿಂದಾಗಿ ಮರುನಿಗದಿಯಾಗಿದ್ದ ಟೆಸ್ಟ್‌ ಪಂದ್ಯದ ಮೊದಲ ಮೂರು ದಿನವೂ ಟೀಂ ಇಂಡಿಯಾ ಪ್ರಾಬಲ್ಯ ಮೆರೆದಿತ್ತು. ಆದರೆ ಕೊನೆಯ ಎರಡು ದಿನದಲ್ಲಿ ಆಕರ್ಷಕ ಪ್ರದರ್ಶನ ತೋರುವ ಮೂಲಕ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿದೆ. ಇದರೊಂದಿಗೆ ಬೆನ್ ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್‌ ತಂಡವು ಸತತ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದಷ್ಟೇ ಅಲ್ಲದೇ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯ ಟೆಸ್ಟ್ ಸರಣಿಯಲ್ಲಿ 2-2ರ ಸಮಬಲ ಸಾಧಿಸುವ ಮೂಲಕ ಸರಣಿ ಡ್ರಾ ಮಾಡಿಕೊಂಡಿದೆ.

ಭಾರತ ನೀಡಿದ್ದ 378 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಆತಿಥೇಯ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಕೇವಲ 3 ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿತ್ತು. ಇನ್ನು ಕೊನೆಯ ದಿನ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ ಕೇವಲ 119 ರನ್‌ಗಳ ಅಗತ್ಯವಿತ್ತು. ಇನ್ನು 5ನೇ ದಿನವೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ (Joe Root) ಹಾಗೂ ಜಾನಿ ಬೇರ್‌ಸ್ಟೋವ್ (Jonny Bairstow), ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಜೋ ರೂಟ್ 136 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ 28ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಟೆಸ್ಟ್ ವೃತ್ತಿಜೀವನದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಬೇರ್‌ಸ್ಟೋವ್‌, ಮತ್ತೊಂದು ಶತಕವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಸಮಯೋಚಿತ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಬೇರ್‌ಸ್ಟೋವ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ 138 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು.

ಮೊದಲ ಮೂರು ದಿನ ಟೀಂ ಇಂಡಿಯಾ ಪ್ರಾಬಲ್ಯ:

ಹೌದು, ಇಲ್ಲಿನ ಎಜ್‌ಬಾಸ್ಟನ್‌ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆರಂಭದಲ್ಲೇ 98 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಜೋಡಿ ಆಕರ್ಷಕ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪಂತ್ 146 ರನ್ ಚಚ್ಚಿದರೇ, ಜಡೇಜಾ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ ನಾನೂರು ರನ್‌ಗಳ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 413 ರನ್‌ಗಳಿಗೆ ಸರ್ವಪತನ ಕಂಡಿತು.

Ind vs Eng ಅಶ್ವಿನ್ ಹೊರಗಿಟ್ಟಿದ್ದಕ್ಕೆ ಭಾರತ ಬೆಲೆ ತೆರುತ್ತಿದೆ ಎಂದ ಕನೇರಿಯಾ..!

ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇದರ ಹೊರತಾಗಿಯೂ ಜಾನಿ ಬೇರ್‌ಸ್ಟೋವ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 284 ರನ್ ಬಾರಿಸಿ ಸರ್ವಪತನ ಕಂಡಿತು. ಇದರೊಂದಿಗೆ ಭಾರತ 132 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು 245 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ 378 ರನ್‌ಗಳ ಗುರಿ ನೀಡಿತ್ತು.

Follow Us:
Download App:
  • android
  • ios