* ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತಕ್ಕೆ ಶರಣಾದ ಆತಿಥೇಯ ಇಂಗ್ಲೆಂಡ್ ತಂಡ* ನಾವೇನು ಭಾರತ ತಂಡಕ್ಕೆ ಹೆದರಿಲ್ಲ ಎಂದು ಇಂಗ್ಲೆಂಡ್ ಕೋಚ್‌* ಭಾರತಕ್ಕೆ ತಿರುಗೇಟು ನೀಡುವ ಸುಳಿವು ನೀಡಿದ ಕ್ರಿಸ್ ಸಿಲ್ವರ್‌ವುಡ್

ಲಂಡನ್‌(ಆ.18): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವುದರೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 151 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇದೀಗ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್‌ ಸಿಲ್ವರ್‌ವುಡ್ ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ತಿರುಗೇಟು ನೀಡುವ ಮಾತುಗಳನ್ನಾಡಿದ್ದಾರೆ.

ಭಾರತ ವಿರುದ್ದದ ಹೋರಾಟದಲ್ಲಿ ನಮ್ಮ ಹುಡುಗರು ಹೆದರಿಕೊಂಡಿಲ್ಲ ಎಂದಿದ್ದಾರೆ. ಅವರು ನಮ್ಮನ್ನು ಹಿಂದೆ ತಳ್ಳಿದ್ದಾರೆ, ನಾವು ಅವರನ್ನು ಹಾಗೆಯೇ ವಾಪಾಸ್ ತಳ್ಳುತ್ತೇವೆ. ಇದೇ ಟೆಸ್ಟ್ ಕ್ರಿಕೆಟ್‌ನ ವೈಶಿಷ್ಠ್ಯ. ಲಾರ್ಡ್ಸ್‌ ಟೆಸ್ಟ್‌ ಫಲಿತಾಂಶದಿಂದ ನಮಗೆ ಸಾಕಷ್ಟು ನಿರಾಸೆಯಾಗಿದೆ. ಆದರೆ ಈ ಟೆಸ್ಟ್ ಪಂದ್ಯವು ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಉಭಯ ದೇಶಗಳ ಹೆಮ್ಮೆಯ ಆಟಗಾರರು ನಡುವಿನ ಕಾದಾಟ ಸಾಕಷ್ಟು ಕಿಚ್ಚು ಹಚ್ಚಿಸುವಂತೆ ಮಾಡಿತ್ತು ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.

ಪಂದ್ಯವನ್ನು ಗೆಲ್ಲಲೇಬೇಕು ಎನ್ನುವ ಜಿದ್ದಾಜಿದ್ದಿನ ಪೈಪೋಟಿ ಎರಡೂ ತಂಡಗಳಿಂದಲೂ ಕಂಡು ಬಂದಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಸಹಜವಾಗಿಯೇ ಜೇಮ್ಸ್‌ ಆ್ಯಂಡರ್‌ಸನ್ ಅವರನ್ನು ಭಾರತೀಯರು ಟಾರ್ಗೆಟ್ ಮಾಡಿದರು. ನಾವು ಕೊನೆಯ ಕ್ಷಣದವರೆಗೂ ಭಾರತೀಯರಿಗೆ ಕಠಿಣ ಪ್ರತಿರೋಧ ತೋರಿದೆವು. ಭಾರತದ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಪ್ರದರ್ಶನವನ್ನು ತೋರುವ ಮೂಲಕ ಪಂದ್ಯ ತಮ್ಮ ಕೈಯಿಂದ ಜಾರುವಂತೆ ಮಾಡಿದರು. ಇದರಿಂದ ನಾವು ಪಾಠವನ್ನು ಕಲಿತಿದ್ದೇವೆ ಎಂದು ಸಿಲ್ವರ್‌ವುಡ್ ಹೇಳಿದ್ದಾರೆ. 

ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೆ: ಕೆ.ಎಲ್ ರಾಹುಲ್‌ ಎಚ್ಚರಿಕೆ

ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ 9ನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್‌ಗೆ ಗೆಲ್ಲಲು ಟೀಂ ಇಂಡಿಯಾ 272 ರನ್‌ಗಳ ಕಠಿಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೊನೆಯ ದಿನ ಕೇವಲ 120 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಶರಣಾಗಿತ್ತು.