Ind vs Eng ನಾನಾಗಿದ್ರೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡುತ್ತಿದ್ದೆ ಎಂದ ಮೋಯಿನ್ ಅಲಿ..!
* ಭಾರತ ಹಾಗೂ ಇಂಗ್ಲೆಂಡ್ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
* ಜುಲೈ 01ರಿಂದ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಟೆಸ್ಟ್ ಪಂದ್ಯ
* ವಿರಾಟ್ ಕೊಹ್ಲಿ ಕೊನೆಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಲಿ ಎಂದ ಅಲಿ
ಲಂಡನ್(ಜೂ.29): ಕಳೆದ ವರ್ಷವಷ್ಟೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿ, ಇದೀಗ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡ ಕೂಡಿಕೊಳ್ಳಲು ಒಲವು ತೋರಿರುವ ಆಲ್ರೌಂಡರ್ ಮೋಯಿನ್ ಅಲಿ, ಇದೀಗ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆನ್ ಸ್ಟೋಕ್ಸ್ ನಾಯಕತ್ವದಡಿಯಲ್ಲಿ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಮೋಯಿನ್ ಅಲಿ ಎದುರು ನೋಡುತ್ತಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವೆ ಪುನರ್‌ನಿಗದಿಯಾಗಿರುವ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಜುಲೈ 01ರಂದು ಬರ್ಮಿಂಗ್‌ಹ್ಯಾಮ್‌ನ (Birmingham Test) ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಕೊನೆಯ ಟೆಸ್ಟ್ ಪಂದ್ಯದ ನಾಯಕತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಸರಣಿಯಲ್ಲಿ ವಿರಾಟ್ ಕೊಹ್ಲಿಯೇ (Virat Kohli) ನಾಯಕರಾಗಿದ್ದರು. ನಾನಾಗಿದ್ದರೇ ಈ ಒಂದು ಪಂದ್ಯದ ಮಟ್ಟಿಗಾದರೂ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ನೀಡುತ್ತಿದ್ದೆ. ಆದರೆ ನಾಯಕತ್ವವನ್ನು ವಹಿಸಿಕೊಳ್ಳುವುದು ಅಥವಾ ಬಿಡುವುದು ವಿರಾಟ್ ಕೊಹ್ಲಿ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ರಿಲ್ಯಾಕ್ಸ್ ಆಗಿದ್ದಂತೆ ಹಾಗೆಯೇ ಸಂತೋಷವಾಗಿದ್ದಂತೆ ಕಂಡು ಬರುತ್ತಿದ್ದಾರೆ. ನಾನು ಇನ್ನು ಮುಂದೆ ಟೆಸ್ಟ್ ನಾಯಕನಾಗಿ ಮುಂದುವರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದ್ದಾರೆ. ಅವರು ನಾಯಕರಾಗಿ ಅಪಾರ ಅನುಭವ ಹೊಂದಿದ್ದಾರೆ. ಈ ಸರಣಿಯು ಭಾರತದ ಪಾಲಿಗೆ ಸಾಕಷ್ಟು ಮಹತ್ವದ್ದಾಗಿದೆ ಎಂದು ಮೋಯಿನ್ ಅಲಿ ಹೇಳಿದ್ದಾರೆ.
ಒಂದು ವೇಳೆ ಈ ಸರಣಿ ಕಳೆದ ವರ್ಷವೇ ಮುಗಿದಿದ್ದರೇ, ಟೀಂ ಇಂಡಿಯಾ 3-1 ಅಂತರದಲ್ಲಿ ಗೆಲ್ಲುವ ಸಾಧ್ಯತೆಯಿತ್ತು. ಆದರೆ ಸದ್ಯ ಇಂಗ್ಲೆಂಡ್ ತಂಡವು ಆಡುವ ರೀತಿಯನ್ನು ಗಮನಿಸಿದರೇ, ಭಾರತ ತಂಡಕ್ಕೆ ಈ ಬಾರಿ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಯಾಕೆಂದರೇ ಈ ಬಾರಿ ಭಾರತ, ಇಂಗ್ಲೆಂಡ್‌ನಲ್ಲಿ ಹೆಚ್ಚು ಸಮಯವನ್ನು ಕಳೆದಿಲ್ಲ. ಇನ್ನು ಇದೇ ವೇಳೆ ಇಂಗ್ಲೆಂಡ್ ತಂಡವು ಕಳೆದ ಕೆಲವು ಪಂದ್ಯಗಳನ್ನು ಆಡಿದ ರೀತಿಯನ್ನು ಗಮನಿಸಿದರೇ, ಇಂಗ್ಲೆಂಡ್ ತಂಡವು ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ ಎಂದು ಮೋಯಿನ್ ಅಲಿ ಹೇಳಿದ್ದಾರೆ.
ಇಂಗ್ಲೆಂಡ್ ಎದುರು 5ನೇ ಟೆಸ್ಟ್ ಗೆಲ್ಲೋದಿರಲಿ, ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಧನೆ..!
ಕಳೆದ ವರ್ಷ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ನಾಲ್ಕು ಟೆಸ್ಟ್ ಪಂದ್ಯ ಮುಕ್ತಾಯದ ವೇಳೆಗೆ ಭಾರತ 2-1 ರ ಮುನ್ನಡೆ ಸಾಧಿಸಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಕೊನೆಯ ಟೆಸ್ಟ್ ಪಂದ್ಯಕ್ಕೂ ಭಾರತೀಯ ಪಾಳಯದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಸರಣಿಯನ್ನು ಮುಂದೂಡಲಾಗಿತ್ತು.
ಇನ್ನು ಇದೇ ವೇಳೆ ಮೋಯಿನ್ ಅಲಿ ತಾವು ಟೆಸ್ಟ್ ನಿವೃತ್ತಿ ವಾಪಾಸ್ ಪಡೆದು ರೆಡ್ ಬಾಲ್ ಕ್ರಿಕೆಟ್ ಆಡಲು ಒಲವು ತೋರಿದ್ದರ ಬಗ್ಗೆಯೂ ತುಟಿಬಿಚ್ಚಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಬ್ರೆಂಡನ್ ಮೆಕ್ಕಲಂ ನನಗೆ ಕರೆ ಮಾಡಿ, ನೋಡಿ ನಿಮಗೆ ಈ ರೀತಿಯ ಕ್ರಿಕೆಟ್ ನಿಮಗೆ ಹೊಂದುತ್ತದೆ. ಒಂದು ಮನಸ್ಸು ಮಾಡಿ ನಿವೃತ್ತಿ ವಾಪಾಸ್ ಪಡೆಯಿರಿ ಎಂದರು. ನಾನದಕ್ಕೆ ಸರಿ ಅಂದೆ ಎಂದು ಮೋಯಿನ್ ಅಲಿ ಹೇಳಿದ್ದಾರೆ.
ಸದ್ಯ ಮೋಯಿನ್ ಅಲಿ, ಇಂಗ್ಲೆಂಡ್ ಟೆಸ್ಟ್ ತಂಡದ ಪರ 64 ಟೆಸ್ಟ್ ಪಂದ್ಯಗಳನ್ನಾಡಿ 5 ಶತಕ ಹಾಗೂ 14 ಅರ್ಧಶತಕ ಸಹಿತ 2,914 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 195 ವಿಕೆಟ್ ಕಬಳಿಸಿದ್ದಾರೆ.