ಪುಣೆ(ಮಾ.26):  ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಭಾರತ ನೀಡಿದ 337 ರನ್‌ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ನಿರಾಯಾಸವಾಗಿ ಗುರಿ ತಲುಪಿದೆ. ಅಂತಿಮ ಹಂತದಲ್ಲಿ ಬಹುಬೇಗನೆ 2 ವಿಕೆಟ್ ಕಳೆದುಕೊಂಡರೂ ಇಂಗ್ಲೆಂಡ್ ಯಾವುದೇ ಆತಂಕಕ್ಕೆ ಒಳಗಾಗದೆ 6 ವಿಕೆಟ್ ಭರ್ಜರಿ ಗೆಲುವು  ಸಾಧಿಸಿತು.

ಬೈರ್‌ಸ್ಟೋ,ಭರ್ಜರಿ ಶತಕ, ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ!

ಬೃಹತ್ ಮೊತ್ತ ಪಡೆದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 110 ರನ್ ಸಿಡಿಸಿತು. ಜೇನ್ ರಾಯ್ 55 ರನ್ ಸಿಡಿಸಿ ಔಟಾದರು. ಆದರೆ ಜಾನಿ ಬೈರ್‌ಸ್ಟೋ ಹಾಗೂ ಬೆನ್ ಸ್ಟೋಕ್ಸ್ ಜೊತೆಯಾಟ ಟೀಂ ಇಂಡಿಯಾವನ್ನು ಸೋಲಿನ ಸುಳಿಗೆ ಸಿಲುಕಿಸಿತು.

ಜಾನಿ ಬೈರ್‌ಸ್ಟೋ 124 ರನ್ ಸಿಡಿಸಿದರೆ, ಸ್ಟೋಕ್ಸ್ 99 ರನ್ ಸಿಡಿಸಿ ಶತಕ ವಂಚಿತರಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾದರು. ಸ್ಟೋಕ್ಸ್ ಪತನದ ಬೆನ್ನಲ್ಲೇ ಇಂಗ್ಲೆಂಡ್ ದಿಢೀರ್ ವಿಕೆಟ್ ಕಳೆದುಕೊಂಡಿತು.  ನಾಯಕ ಜೋಸ್ ಬಟ್ಲರ್ ಶೂನ್ಯಕ್ಕೆ ಔಟಾದರು.

ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಜೊತೆಯಾಟ ಇಂಗ್ಲೆಂಡ್ ತಂಡದ ಗೆಲುವು ಖಚಿತ ಪಡಿಸಿತು. 43.3 ಓವರ್‌ಗಳಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 6 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್ 3 ಏಕದಿನ ಪಂದ್ಯದಲ್ಲಿ ಇದೀಗ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.