ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿ ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಅವರು ಸೂರ್ಯಕುಮಾರ್ ಯಾದವ್ ಅವರ ಭಾರತೀಯ ದಾಖಲೆಯನ್ನು ಸಹ ಅಳಿಸಿಹಾಕಿದ್ದಾರೆ.
ಚೆಸ್ಟರ್-ಲೆ-ಸ್ಟ್ರೀಟ್: ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ20 ಮಾದರಿಯಲ್ಲಿ ಅತಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ಆಟಗಾರ ಎಂಬ ವಿಶ್ವದಾಖಲೆಯನ್ನು ಈ 25 ವರ್ಷದ ಎಡಗೈ ಬ್ಯಾಟರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಈ ಐತಿಹಾಸಿಕ ಸಾಧನೆ ಮಾಡಿದರು.
ಎವಿನ್ ಲೂಯಿಸ್ ದಾಖಲೆ ಧೂಳೀಪಟ
ಈ ಹಿಂದೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಎವಿನ್ ಲೂಯಿಸ್ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದರು. ಲೂಯಿಸ್ 789 ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ, ಅಭಿಷೇಕ್ ಕೇವಲ 785 ಎಸೆತಗಳಲ್ಲಿ ಈ ಸಾಧನೆ ಮಾಡಿ ಹೊಸ ಇತಿಹಾಸ ಬರೆದರು. ಇನ್ನು ನ್ಯೂಜಿಲೆಂಡ್‌ನ ಫಿನ್ ಅಲೆನ್ 871 ಎಸೆತಗಳನ್ನು ಎದುರಿಸಿ ನೂರು ಸಿಕ್ಸರ್ ಸಾಧನೆ ಮಾಡಿದ್ದಾರೆ. ಇನ್ನು ಇನ್ನಿಂಗ್ಸ್‌ಗಳ ಆಧಾರದಲ್ಲಿ ಅಭಿಷೇಕ್ ಶರ್ಮಾ ಎರಡನೇ ಅತಿವೇಗದ 100 ಸಿಕ್ಸರ್ ಸಾಧಕ ಎನಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ 48 ಇನ್ನಿಂಗ್ಸ್‌ಗಳನ್ನಾಡಿ 100 ಸಿಕ್ಸರ್ ಸಿಡಿಸಿದ್ದರೇ, ಎವಿನ್ ಲೆವಿಸ್ 42 ಇನ್ನಿಂಗ್ಸ್‌ಗಳಲ್ಲೇ 100 ಸಿಕ್ಸರ್ ಬಾರಿಸಿದ್ದರು.
ಸೂರ್ಯಕುಮಾರ್ ಯಾದವ್ ದಾಖಲೆ ಮುರಿದ ಅಭಿಷೇಕ್ ಶರ್ಮಾ:
ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಭಾರತದ ಮಿಸ್ಟರ್ 360 ಡಿಗ್ರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿದ್ದ ದಾಖಲೆಯನ್ನೂ ಇದೀಗ ಅಭಿಷೇಕ್ ಶರ್ಮಾ ಬ್ರೇಕ್ ಮಾಡಿದ್ದಾರೆ. ಈ ಮೊದಲು ಸೂರ್ಯಕುಮಾರ್ ಯಾದವ್ 1007 ಎಸೆತಗಳನ್ನು ಎದುರಿಸಿ 100 ಸಿಕ್ಸರ್ ಸಿಡಿಸುವ ಮೂಲಕ, ಭಾರತ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ 100 ಸಿಕ್ಸರ್ ಸಾಧಕನಾಗಿ ಹೊರಹೊಮ್ಮಿದ್ದರು. ಇದೀಗ ಆ ದಾಖಲೆಯನ್ನು ಅಭಿಷೇಕ್ ಶರ್ಮಾ ಅಳಿಸಿ ಹಾಕಿದ್ದಾರೆ. ಈ ಮೂಲಕ, ಭಾರತದ ಅತ್ಯಂತ ಅಪಾಯಕಾರಿ ವೈಟ್-ಬಾಲ್ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಅಭಿಷೇಕ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
ಇನ್ನು ಒಟ್ಟಾರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 100 ಸಿಕ್ಸರ್ ಬಾರಿಸಿದ ದಾಖಲೆ ವೈಭವ್ ಸೂರ್ಯವಂಶಿ ಹೆಸರಿನಲ್ಲಿದೆ. ವೈಭವ್ ಸೂರ್ಯವಂಶಿ ಕೇವಲ 515 ಎಸೆತಗಳನ್ನು ಎದುರಿಸಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ. ಅಂದರೆ ಬಹುತೇಕ ಪ್ರತಿ 5 ಎಸೆತಕ್ಕೆ ಒಂದು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.


