ಅಹಮದಾಬಾದ್ ಟೆಸ್ಟ್: ಸುಂದರ್ ಚೊಚ್ಚಲ ಶತಕದ ಕನಸು ಭಗ್ನ, ಭಾರತ ಆಲೌಟ್ @365
ಇಂಗ್ಲೆಂಡ್ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂಡಿಯಾ 365 ರನ್‌ಗಳಿಗೆ ಸರ್ವಪತನ ಕಂಡಿದೆ. ವಾಷಿಂಗ್ಟನ್ ಸುಂದರ್ 96 ರನ್ ಬಾರಿಸಿ ಅಜೇಯರಾಗುಳಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಹಮದಾಬಾದ್(ಮಾ.06): ಟೀಂ ಇಂಡಿಯಾ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಬಾರಿಸುವ ಕನಸು ಭಗ್ನವಾಗಿದೆ. ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಭಾರತ 365 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 160 ರನ್ ಮುನ್ನಡೆ ಸಾಧಿಸಿದ್ದು, ವಾಷಿಂಗ್ಟನ್ ಸುಂದರ್ 96 ರನ್ ಬಾರಿಸಿ ಅಜೇಯರಾಗುಳಿದರು.
ಹೌದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಬ್ಯಾಟಿಂದ ಸುಂದರ ಶತಕ ಮೂಡಿಬರಬಹುದು ಎಂದು ಎಲ್ಲರೂ ಭಾವಿಸಿದ್ದರು. ಬೌಲಿಂಗ್ ಪಿಚ್ ಎನ್ನುವ ಟೀಕೆಯ ಹೊರತಾಗಿಯೂ ಪಂತ್ ಎರಡನೇ ದಿನದಾಟದಲ್ಲೇ ಸ್ಫೋಟಕ ಶತಕ ಬಾರಿಸಿದ್ದರು. ಇದೀಗ ಸುಂದರ್ ಕೂಡಾ ಟೆಸ್ಟ್ ಸೆಂಚುರಿ ಬಾರಿಸಲಿದ್ದಾರೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. 8ನೇ ವಿಕೆಟ್‌ಗೆ ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಶತಕದ(106) ಜತೆಯಾಟ ತಂಡಕ್ಕೆ ಮತ್ತಷ್ಟು ಬಲ ತುಂಬುವಂತೆ ಮಾಡಿತ್ತು. ಆದರೆ ಅಕ್ಷರ್ ಪಟೇಲ್ ರನೌಟ್ ಆಗುವ ಮೂಲಕ ಕೇವಲ 5 ಎಸೆತಗಳ ಅಂತರದಲ್ಲಿ ಭಾರತ ಕೊನೆಯ 3 ವಿಕೆಟ್ ಕಳೆದುಕೊಂಡಿತು.
ಒಟ್ಟು 174 ಎಸೆತಗಳನ್ನು ಎದುರಿಸಿದ ವಾಷಿಂಗ್ಟನ್ ಸುಂದರ್ 10 ಬೌಂಡರಿ ಹಾಗೂ ಒಂದು ಮನಮೋಹಕ ಸಿಕ್ಸರ್ ನೆರವಿನಿಂದ 96 ರನ್ ಬಾರಿಸಿ ಅಜೇಯರಾಗುಳಿದರು. ಇನ್ನು ಅಕ್ಷರ್ ಪಟೇಲ್ 43 ರನ್ ಬಾರಿಸಿ ಸುಂದರ್‌ಗೆ ಉತ್ತಮ ಸಾಥ್ ನೀಡಿದ್ದರು. ಕೊನೆಯಲ್ಲಿ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಶೂನ್ಯ ಸಂಪಾದನೆ ಮಾಡಿ ಬೆನ್ ಸ್ಟೋಕ್ಸ್‌ಗೆ ಬಲಿಯಾದರು.
ರಿಷಭ್ ಪಂತ್ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುತ್ತಾರೆ: ಗಂಗೂಲಿ!
ಒಂದು ಹಂತದಲ್ಲಿ 146 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಆತಂಕಕ್ಕೀಡಾಗಿದ್ದ ಭಾರತಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಹಾಗೂ ವಾಷಿಂಗ್ಟನ್ ಸುಂದರ್ 7ನೇ ವಿಕೆಟ್‌ಗೆ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಅದರಲ್ಲೂ ಎರಡನೇ ದಿನದಾಟದಲ್ಲೇ ಪಂತ್ ಸ್ಫೋಟಕ ಶತಕ ಬಾರಿಸಿ ಮಿಂಚಿದ್ದರು.
ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 4 ವಿಕೆಟ್ ಪಡೆದರೆ, ಜೇಮ್ಸ್ ಆಂಡರ್‌ಸನ್ 3 ಹಾಗೂ ಜಾಕ್ ಲೀಚ್ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 205/10
ಭಾರತ: 365/10