ರಿಷಭ್ ಪಂತ್ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುತ್ತಾರೆ: ಗಂಗೂಲಿ!
ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೆಚ್ಚೆದೆಯ ಶತಕ ಬಾರಿಸಿದ ರಿಷಭ್ ಪಂತ್ ಮುಂದೊಂದು ದಿನ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಂಡಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಮಾ.06): ಭಾರತದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಿಗೆ ಸೇರುತ್ತಾರೆ ಎಂದು ಭಾರತದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪಂತ್ ಶತಕ ಬಾರಿಸುತ್ತಿದ್ದಂತೆ ಟ್ವೀಟರ್‌ನಲ್ಲಿ ಖುಷಿ ವ್ಯಕ್ತಪಡಿಸಿದ ಗಂಗೂಲಿ, ‘ಒತ್ತಡದ ನಡುವೆ ಪಂತ್ ನಂಬಲಸಾಧ್ಯವಾದ ಆಟವಾಡಿದ್ದಾರೆ. ಅಂದಹಾಗೆ ಇದು ಮೊದಲೇನಲ್ಲ, ಕೊನೆ ಬಾರಿಯೂ ಅಲ್ಲ. ಮುಂಬರುವ ವರ್ಷಗಳಲ್ಲಿ ಅವರು ಎಲ್ಲಾ ಮಾದರಿಯಲ್ಲೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ಬೆಳೆಯುತ್ತಾರೆ’ ಎಂದು ಬರೆದಿದ್ದಾರೆ.
ಅಹಮದಾಬಾದ್ ಟೆಸ್ಟ್: ಪಂತ್ ಶತಕ, ಭಾರತಕ್ಕೆ 89 ರನ್‌ಗಳ ಮುನ್ನಡೆ
ಟೀಂ ಇಂಡಿಯಾ 80 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ರಿಷಭ್ ಪಂತ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಮೂಲಕ ತಂಡದ ಪಾಲಿಗೆ ಮತ್ತೊಮ್ಮೆ ಆಪತ್ಬಾಂಧವನಾಗಿ ಬೆಳೆದುನಿಂತರು. ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ಪಂತ್ ಆ ಬಳಿಕ ಸಹಜ ಶೈಲಿಯ ಬ್ಯಾಟಿಂಗ್ ನಡೆಸಿದರು. 118 ಎಸೆತಗಳನ್ನು ಎದುರಿಸಿದ ಪಂತ್ 13 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಪಂತ್ ಕಳೆದ ಆರು ಟೆಸ್ಟ್ ಪಂದ್ಯಗಳ ಪೈಕಿ 5 ಬಾರಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಪಂತ್ ಭಾರತದಲ್ಲಿ ಬಾರಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ.