ಅಹಮದಾಬಾದ್ ಟೆಸ್ಟ್: ಇನಿಂಗ್ಸ್ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ
ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಗೆದ್ದು ಬೀಗಲು ಇನ್ನು ಕೇವಲ 4 ವಿಕೆಟ್‌ಗಳ ಅಗತ್ಯವಿದೆ. ಅಶ್ವಿನ್ ಹಾಗೂ ಅಕ್ಷರ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಮತ್ತೊಮ್ಮೆ ಕಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಹಮದಾಬಾದ್(ಮಾ.06): ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳು ಮತ್ತೊಮ್ಮೆ ಜಾದೂ ಮಾಡಿದ್ದು, ಪ್ರವಾಸಿ ಇಂಗ್ಲೆಂಡ್ ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ. ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಕೇವಲ 91 ರನ್ ಬಾರಿಸಿದ್ದೂ ಇನ್ನೂ 69 ರನ್‌ಗಳ ಹಿನ್ನಡೆಯಲ್ಲಿದೆ. ಭಾರತಕ್ಕೆ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಲು ಕೇವಲ 4 ವಿಕೆಟ್‌ಗಳ ಅವಶ್ಯಕತೆಯಿದೆ.
ಹೌದು, ಭಾರತ ತಂಡವನ್ನು 365 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 160 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ಗೆ ಭಾರತೀಯ ಸ್ಪಿನ್ನರ್‌ಗಳು ಮತ್ತೊಮ್ಮೆ ಕಾಟಕೊಟ್ಟಿದ್ದಾರೆ. ತಂಡದ ಮೊತ್ತ 20 ರನ್ ಗಳಾಗುವಷ್ಟರಲ್ಲಿ ಅಗ್ರ ಕ್ರಮಾಂದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ಅಶ್ವಿನ್ ಸತತ ಎರಡು ಎಸೆತಗಳಲ್ಲಿ ಕ್ರಾಲಿ(5) ಹಾಗೂ ಜಾನಿ ಬೇರ್‌ಸ್ಟೋವ್(0)ರನ್ನು ಪೆವಿಲಿಯನ್ನಿಗಟ್ಟಿದರೆ, ಅಕ್ಷರ್ ಪಟೇಲ್ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಡೋಮಿನಿಕ್ ಸಿಬ್ಲಿ(3), ಬೆನ್ ಸ್ಟೋಕ್ಸ್(2) ಹಾಗೂ ಓಲಿ ಪೋಪ್(15)ಗೆ ಪೆವಿಲಿಯನ್ ಹಾದಿ ತೋರಿಸಿದರು.
ಅಹಮದಾಬಾದ್ ಟೆಸ್ಟ್: ಸುಂದರ್ ಚೊಚ್ಚಲ ಶತಕದ ಕನಸು ಭಗ್ನ, ಭಾರತ ಆಲೌಟ್ @365
ಇಂಗ್ಲೆಂಡ್ ನಾಯಕ ಜೋ ರೂಟ್ ಕೆಲಕಾಲ ನೆಲಕಚ್ಚಿ ಆಡುವ ಪ್ರಯತ್ನ ನಡೆಸಿದರು. 72 ಎಸೆತಗಳನ್ನು ಎದುರಿಸಿದ ರೂಟ್ 3 ಬೌಂಡರಿ ಸಹಿತ 30 ರನ್ ಬಾರಿಸಿ ಅಶ್ವಿನ್‌ಗೆ ಮೂರನೇ ಬಲಿಯಾದರು. ಸದ್ಯ ಡೇನಿಯಲ್ ಲಾರೆನ್ಸ್(19) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್ 6 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 205& 91/6
ಭಾರತ: 365
(* ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ)