ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವು ಭಾರತ ವಿರುದ್ದ ಏಕದಿನ ಸರಣಿಯಲ್ಲಿಂದು ನಿರ್ಣಾಯಕ ಪಂದ್ಯದಲ್ಲಿಂದು ಸೆಣಸಾಟ ನಡೆಸಲಿದ್ದು, ಹೈವೋಲ್ಟೇಜ್‌ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪುಣೆ(ಮಾ.28): ಮೊದಲ ಪಂದ್ಯದಲ್ಲಿ ಆರ್ಭಟಿಸಿದ್ದ ಭಾರತಕ್ಕೆ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಿರುಗೇಟು ನೀಡಿದ್ದು, ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಇದೀಗ ಭಾನುವಾರ ನಡೆಯಲಿರುವ ಏಕದಿನ ಸರಣಿಯ ಕೊನೆಯ ಹಾಗೂ 3ನೇ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದ್ದು, ಗೆದ್ದ ತಂಡಕ್ಕೆ ಕಪ್‌ ಒಲಿಯಲಿದೆ.

ಈಗಾಗಲೇ ಟೆಸ್ಟ್‌ ಹಾಗೂ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿರುವ ಭಾರತ, ಕೊನೆಯ ಏಕದಿನ ಪಂದ್ಯದಲ್ಲಿ ಪುಟಿದೆದ್ದು ಏಕದಿನ ಸರಣಿಯನ್ನೂ ತನ್ನದಾಗಿಸಿಕೊಳ್ಳುವ ಮೂಲಕ ವಿಶ್ವ ಚಾಂಪಿಯನ್ನರಿಗೆ ತಕ್ಕ ಪಾಠ ಕಲಿಸುವ ದೃಢ ವಿಶ್ವಾಸದಲ್ಲಿದೆ. ಈ ಮೂಲಕ ಏಕದಿನ ಮಾದರಿಯಲ್ಲಿ ಹ್ಯಾಟ್ರಿಕ್‌ ಸರಣಿ ಸೋಲು ತಪ್ಪಿಸಿಕೊಳ್ಳುವ ತವಕದಲ್ಲಿ ಭಾರತ ಕಣಕ್ಕೆ ಇಳಿಯಲಿದೆ. ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಆಸ್ಪ್ರೇಲಿಯಾ ಪ್ರವಾಸದಲ್ಲಿ ಭಾರತ ಏಕದಿನ ಸರಣಿಯಲ್ಲಿ ಸೋಲುಂಡಿತ್ತು. ಜೊತೆಗೆ ಈ ಸರಣಿ ಸೋತರೆ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಲಿದೆ. ಒಂದೊಮ್ಮೆ ಭಾರತ ಈ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ್ದರೆ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುತ್ತಿತ್ತು.

ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಪುಣೆಯ ಪಿಚ್‌ನಲ್ಲಿ ಎರಡು ತಂಡಗಳ ಬ್ಯಾಟ್ಸ್‌ಗಳು ಅಬ್ಬರಿಸುತ್ತಿದ್ದು, ರನ್‌ ಹೊಳೆ ಹರಿಯುತ್ತಿದೆ. 2ನೇ ಏಕದಿನ ಪಂದ್ಯದಲ್ಲಿ 34 ಸಿಕ್ಸರ್‌ಗಳು ಮೂಡಿ ಬಂದಿದ್ದು, ಬೌಲರ್‌ಗಳು ಕಂಗಾಲಾಗಿದ್ದಾರೆ.

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ, ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!

ಬ್ಯಾಟಿಂಗ್‌ ವಿಭಾಗದಲ್ಲಿ ಟೀಂ ಇಂಡಿಯಾದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿದ್ದು, ರೋಹಿತ್‌ ಶರ್ಮಾ, ಧವನ್‌, ರಾಹುಲ್‌ ಉತ್ತಮ ಫಾಮ್‌ರ್‍ನಲ್ಲಿದ್ದಾರೆ. ನಾಯಕ ಕೊಹ್ಲಿ ಲಯಕ್ಕೆ ಮರಳಿದ್ದು, ತಂಡದ ಬಲವನ್ನು ಇಮ್ಮಡಿಗೊಳಿಸಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌, ಹಾರ್ದಿಕ್‌ ಹಾಗೂ ಕೃನಾಲ್‌ ಪಾಂಡ್ಯ ಎದುರಾಳಿಗೆ ದಿಟ್ಟಉತ್ತರ ನೀಡುತ್ತಿದ್ದು, ಕೊನೆಯ ಓವರ್‌ಗಳಲ್ಲಿ ರನ್‌ ಸೂರೆ ಮಾಡುತ್ತಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಭಾರತ 300+ ರನ್‌ ಗಳಿಸಿರುವುದೇ ಇದಕ್ಕೆ ಸಾಕ್ಷಿ.

ಆದರೆ, ತಂಡದ ಬೌಲಿಂಗ್‌ ಮತ್ತಷ್ಟು ಮೊನಚಾಗಬೇಕಿದೆ. 2ನೇ ಪಂದ್ಯದಲ್ಲಿ 336 ರನ್‌ ಗಳಿಸಿದ್ದರೂ, ಇದನ್ನು ಕಾಪಾಡಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾಗಿದ್ದರು. ಅದರಲ್ಲೂ ಕುಲ್ದೀಪ್‌ ಯಾದವ್‌ ಮತ್ತು ಕೃನಾಲ್‌ ಪಾಂಡ್ಯ ನಿರಾಯಾಸವಾಗಿ ರನ್‌ ಬಿಟ್ಟುಕೊಡುವ ಮೂಲಕ ಪಂದ್ಯ ಕೈ ಜಾರಲು ಕಾರಣರಾಗಿದ್ದರು. ಇದೀಗ ಕೊನೆಯ ಪಂದ್ಯದಲ್ಲಿ ಕುಲ್ದೀಪ್‌ ಬದಲಿಗೆ ಅನುಭವಿ ಯಜುವೇಂದ್ರ ಚಹಲ್‌ ಆಡುವುದು ಬಹುತೇಕ ಖಚಿತವಾಗಿದ್ದು, ಇನ್ನು ಕೃನಾಲ್‌ ಬದಲು ಆಲ್ರೌಂಡರ್‌ ವಾಷಿಂಗ್‌ಟನ್‌ ಸುಂದರ್‌ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿದೆ.

ಬೌಲಿಂಗ್‌ ವಿಭಾಗವನ್ನು ಮುನ್ನಡೆಸುತ್ತಿರುವ ಭುವನೇಶ್ವರ್‌ ಕುಮಾರ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯದಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಶ್ರಾಂತಿ ನೀಡಿ ಯಾರ್ಕರ್‌ ಸ್ಪೆಷಲಿಸ್ಟ್‌ ಟಿ.ನಟರಾಜನ್‌ಗೆ ಅವಕಾಶ ನೀಡಿದರು ಅಚ್ಚರಿಯಿಲ್ಲ. ಕನ್ನಡಿಗ ಪ್ರಸಿದ್ಧ ಕೃಷ್ಣ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, 2 ಪಂದ್ಯಗಳಿಂದ 6 ವಿಕೆಟ್‌ ಕಬಳಿಸಿದ್ದಾರೆ. ಹೀಗಾಗಿ ಪ್ರಸಿದ್‌್ಧ ಬದಲು ಅನುಭವಿ ಮೊಹಮ್ಮದ್‌ ಸಿರಾಜ್‌ಗೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ.

ಇಂಗ್ಲೆಂಡ್‌ ಹುಮ್ಮಸ್ಸು ಇಮ್ಮಡಿ:

ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಬೌಲಿಂಗ್‌ ವಿಭಾಗದಲ್ಲಿ ಮಂಕಾಗಿದ್ದರೂ, ಬ್ಯಾಟಿಂಗ್‌ನಲ್ಲಿ ಮಿಂಚಿದ ಇಂಗ್ಲೆಂಡ್‌ನ ಹುಮ್ಮಸ್ಸು ದುಪ್ಪಟ್ಟುಗೊಂಡಿದೆ. ಅದರಲ್ಲೂ ಬೆನ್ ಸ್ಟೋಕ್ಸ್‌ ಫಾಮ್‌ರ್‍ಗೆ ಮರಳಿರುವುದು ಪ್ರವಾಸಿ ತಂಡದ ಬ್ಯಾಟಿಂಗ್‌ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಜಾನಿ ಬೇರ್‌ಸ್ಟೋವ್‌, ಜೇಸನ್‌ ರಾಯ್‌, ಜೋಸ್‌ ಬಟ್ಲರ್‌ ಇಂಗ್ಲೆಂಡ್‌ನ ಪ್ರಮುಖ ಟ್ರಂಪ್‌ ಕಾರ್ಡ್‌ ಆಗಿದ್ದಾರೆ. ಒಟ್ಟಾರೆ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮತ್ತೊಂದು ಕುತೂಹಲಕಾರಿ ಪಂದ್ಯಕ್ಕೆ ಸೂಪರ್‌ ಸಂಡೇ ಸಾಕ್ಷಿಯಾಗಲಿದ್ದು, ಬಣ್ಣಗಳ ಹಬ್ಬ ಹೋಳಿಯಂದು ಯಾರು ಬಣ್ಣಗಳಲ್ಲಿ ಮಿಂದೇಳುತ್ತಾರೋ ಕಾದು ನೋಡಬೇಕಿದೆ.

ಪಿಚ್‌ ರಿಪೋರ್ಟ್‌:

ಪುಣೆಯ ಎಂಸಿಎ ಮೈದಾನ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಮೊದಲೆರಡು ಪಂದ್ಯಗಳಲ್ಲಿ ಹರಿದು ಬಂದಿರುವ ರನ್‌ಗಳೇ ಇದಕ್ಕೆ ಸಾಕ್ಷಿ. ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಮೊತ್ತ 280-290 ರನ್‌ ಆಗಿದ್ದರೂ, 2 ಪಂದ್ಯದಲ್ಲೂ 300ಕ್ಕಿಂತ ಅಧಿಕ ರನ್‌ ಬಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳೇ ಅಬ್ಬರಿಸುವ ಸಾಧ್ಯತೆದಟ್ಟವಾಗಿದ್ದು, ಬೌಲರ್‌ಗಳಿಗೆ ಕೊಂಚ ಕಷ್ಟವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ/ವಾಷಿಂಗ್‌ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಹಲ್‌, ಶಾರ್ದೂಲ್‌ ಠಾಕೂರ್‌/ಟಿ.ನಟರಾಜನ್‌.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋವ್‌, ಬೆನ್‌ ಸ್ಟೋಕ್ಸ್‌, ಡೇವಿಡ್‌ ಮಲಾನ್‌, ಜಾಸ್‌ ಬಟ್ಲರ್‌(ನಾಯಕ), ಲಿಯಾಮ್‌ ಲಿವಿಂಗ್‌ ಸ್ಟೋನ್‌, ಮೊಯಿನ್‌ ಅಲಿ, ಸ್ಯಾಮ್‌ ಕರ್ರನ್‌, ಮಾರ್ಕ್ವುಡ್‌, ಆದಿಲ್‌ ರಶೀದ್‌, ರೀಸ್‌ ಟೋಪ್ಲೆ

ಸ್ಥಳ: ಪುಣೆ
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್