ಅಹಮದಾಬಾದ್(ಮಾ.12)‌: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಜಯಿಸಿದ ಭಾರತ, ಶುಕ್ರವಾರದಿಂದ ವಿಶ್ವ ನಂ.1 ಟಿ20 ತಂಡದ ವಿರುದ್ಧ 5 ಪಂದ್ಯಗಳ ಸರಣಿಯನ್ನು ಆಡಲಿದೆ. ತವರಿನಲ್ಲಿ ಭಾರತದ ಪ್ರಾಬಲ್ಯ ಮತ್ತೊಮ್ಮೆ ಪರೀಕ್ಷೆಗೆ ಒಳಪಡುವುದರ ಜೊತೆಗೆ ವಿರಾಟ್‌ ಕೊಹ್ಲಿ ಪಡೆಗೆ ಇದೇ ವರ್ಷ ಭಾರತದಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಅನುಕೂಲವಾಗಲಿದೆ.

ರೋಹಿತ್‌-ರಾಹುಲ್‌ ಆರಂಭಿಕರು: ಟೆಸ್ಟ್‌ ಸರಣಿಯಲ್ಲಿ ಆಕರ್ಷಕ ಆಟವಾಡಿ ಟಿ20 ತಂಡಕ್ಕೆ ಮರಳಿರುವ ರಿಷಭ್‌ ಪಂತ್‌, ವಿಕೆಟ್‌ ಕೀಪರ್‌ ಸ್ಥಾನದಲ್ಲಿ ಆಡುವುದು ಖಚಿತ. ಹೀಗಾಗಿ ಕೆ.ಎಲ್‌.ರಾಹುಲ್‌ ತಜ್ಞ ಬ್ಯಾಟ್ಸ್‌ಮನ್‌ ಆಗಿ ಆಡಬೇಕಿದೆ. ಆರಂಭಿಕನಾಗಿ ರಾಹುಲ್‌ ಆಡುವುದಾಗಿ ನಾಯಕ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ರೋಹಿತ್‌ ಜೊತೆ ಕರ್ನಾಟಕ ಬ್ಯಾಟ್ಸ್‌ಮನ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಶಿಖರ್‌ ಧವನ್‌ ಮೀಸಲು ಆಟಗಾರನಾಗಿ ಬೆಂಚ್‌ ಕಾಯಲಿದ್ದಾರೆ.

ಟಿ20 ಕ್ರಿಕೆಟ್‌: ಟೀಂ ಇಂಡಿಯಾಗೆ ಮತ್ತೆ ನಂ.1 ಆಗುವ ಗುರಿ

4ನೇ ಕ್ರಮಾಂಕಕ್ಕೆ ಯಾರು?

3ನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. 4ನೇ ಕ್ರಮಾಂಕಕ್ಕೆ ಮುಂಬೈನ ಶ್ರೇಯಸ್‌ ಅಯ್ಯರ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ನಡುವೆ ಸ್ಪರ್ಧೆ ಇದೆ. ಶ್ರೇಯಸ್‌ ಆಸ್ಪ್ರೇಲಿಯಾ ವಿರುದ್ಧ 5 ಪಂದ್ಯಗಳಲ್ಲಿ ಹೆಚ್ಚು ಯಶಸ್ಸು ಕಾಣದಿದ್ದರೂ ವಿಜಯ್‌ ಹಜಾರೆ ಟೂರ್ನಿಯಲ್ಲಿ 2 ಶತಕ ಬಾರಿಸಿ ಲಯ ಕಂಡುಕೊಂಡಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಉತ್ತಮ ಆಟವಾಡಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಸೂರ್ಯ ಪಾದಾರ್ಪಣೆಗಾಗಿ ಕಾಯುತ್ತಿದ್ದಾರೆ.

ಇಬ್ಬರು ವೇಗಿಗಳು ಯಾರು?

ಹಾರ್ದಿಕ್‌ ಪಾಂಡ್ಯ ಸಂಪೂರ್ಣ ಫಿಟ್‌ ಆಗಿದ್ದು, ಬೌಲಿಂಗ್‌ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಹಾರ್ದಿಕ್‌ ಜೊತೆ ಇಬ್ಬರು ವೇಗಿಗಳು ಕಣಕ್ಕಿಳಿಯಲಿದ್ದಾರೆ. ಸ್ಪಿನ್ನರ್‌ಗಳಾಗಿ ಯಜುವೇಂದ್ರ ಚಹಲ್‌ ಜೊತೆಗೆ ವಾಷಿಂಗ್ಟನ್‌ ಸುಂದರ್‌ ಹಾಗೂ ಅಕ್ಷರ್‌ ಪಟೇಲ್‌ ಆಡುವುದು ಬಹುತೇಕ ಖಚಿತ. ಬುಮ್ರಾ ಹಾಗೂ ಶಮಿ ಅನುಪಸ್ಥಿತಿಯಲ್ಲಿ ಅನುಭವಿ ಭುವನೇಶ್ವರ್‌ ಕುಮಾರ್‌ ಸೇವೆ ತಂಡಕ್ಕೆ ಅಗತ್ಯವಿದೆ. ನಟರಾಜನ್‌ ಇನ್ನೂ ಅಹಮದಾಬಾದ್‌ಗೆ ತಲುಪಿಲ್ಲ. ಹೀಗಾಗಿ ಮತ್ತೊಂದು ಸ್ಥಾನಕ್ಕೆ ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌ ಹಾಗೂ ನವ್‌ದೀಪ್‌ ಸೈನಿ ಮಧ್ಯೆ ಸ್ಪರ್ಧೆ ಏರ್ಪಡಲಿದೆ. ಚಹರ್‌ ಆರಂಭಿಕ ಹಾಗೂ ಡೆತ್‌ ಓವರ್‌ಗಳಲ್ಲಿ ಉತ್ತಮ ದಾಳಿ ನಡೆಸಬಲ್ಲರು. ಶಾರ್ದೂಲ್‌ ಸ್ವಿಂಗ್‌ ಬೌಲಿಂಗ್‌ ಜೊತೆ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇಂಗ್ಲೆಂಡ್‌ಗೆ ಟಿ20 ತಜ್ಞರ ಬಲ

ವಿಶ್ವ ನಂ.1 ತಂಡ ಇಂಗ್ಲೆಂಡ್‌ ಟಿ20 ತಜ್ಞರಿಂದ ಕೂಡಿದೆ. ರಾಯ್‌, ಬಟ್ಲರ್‌, ಬೇರ್‌ಸ್ಟೋವ್‌, ಮೊರ್ಗನ್‌, ಅಲಿ, ಸ್ಟೋಕ್ಸ್‌ ಹೀಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ತಂಡದಲ್ಲಿರುವ ಬಹುತೇಕರಿಗಿದೆ. ಇಂಗ್ಲೆಂಡ್‌ ತಂಡವನ್ನು ಸೋಲಿಸುವುದು ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಪಿಚ್‌ ರಿಪೋರ್ಟ್‌: ಅಹಮದಾಬಾದ್‌ನ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಇದೇ ವರ್ಷ ಜನವರಿಯಲ್ಲಿ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ನಾಕೌಟ್‌ ಪಂದ್ಯಗಳು ಇದೇ ಮೈದಾನದಲ್ಲಿ ನಡೆದಿದ್ದವು. ಆ ವೇಳೆ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್‌ 140-150 ಆಗಿತ್ತು. ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ ವೇಳೆಯೂ ಇಲ್ಲಿ ಬ್ಯಾಟ್‌ ಮಾಡುವುದು ಸುಲಭ ಎನಿಸಿರಲಿಲ್ಲ.

ಒಟ್ಟು ಮುಖಾಮುಖಿ: 14

ಭಾರತ: 07

ಇಂಗ್ಲೆಂಡ್‌: 07

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಧವನ್‌/ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌(ನಾಯಕ), ಬೆನ್‌ ಸ್ಟೋಕ್ಸ್‌, ಮೋಯಿನ್‌ ಅಲಿ, ಸ್ಯಾಮ್‌ ಕರ್ರನ್‌, ಆದಿಲ್‌ ರಶೀದ್‌, ಕ್ರಿಸ್‌ ಜೋರ್ಡನ್‌, ಮಾರ್ಕ್ ವುಡ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್