ಇಂದಿನಿಂದ ಟೀಂ ಇಂಡಿಯಾಗೆ ಚೆನ್ನೈನಲ್ಲಿ ಬಾಂಗ್ಲಾ ಟೆಸ್ಟ್
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದ್ದು, ರೋಹಿತ್ ಶರ್ಮಾ ಪಡೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಚೆನ್ನೈ: ಭಾರತ ಕ್ರಿಕೆಟ್ ತಂಡ ಮೈಗೊಡವಿ ಮತ್ತೆ ಅಖಾಡಕ್ಕಿಳಿಯುವ ಸಮಯ ಬಂದಿದೆ. ಸುದೀರ್ಘ ಟೆಸ್ಟ್ ಋತು ಮುಂದಿದ್ದು, ಕಳೆದ 6 ತಿಂಗಳಿಂದ ಒಂದೂ ಟೆಸ್ಟ್ ಆಡದ ಟೀಂ ಇಂಡಿಯಾ ಮುಂದಿನ ಮೂರುವರೆ ತಿಂಗಳಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿಯೊಂದಿಗೆ ಭಾರತಕ್ಕೆ ಸವಾಲು ಆರಂಭಗೊಳ್ಳಲಿದ್ದು, ಆ ಸರಣಿಯ ಮೊದಲ ಪಂದ್ಯ ಗುರುವಾರದಿಂದ ಇಲ್ಲಿ ನ ಚೆಪಾಕ್ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಯಾವುದೇ ತಂಡಕ್ಕಾದರೂ ಭಾರತದಲ್ಲಿ ಟೆಸ್ಟ್ ಗೆಲ್ಲುವುದು ಭಾರಿ ಕಷ್ಟದ ಕೆಲಸ ಎನ್ನುವುದರಲ್ಲಿ ಅನುಮಾನವಿಲ್ಲ. ಈ ವಿಚಾರವನ್ನು ಒಪ್ಪಿಕೊಂಡಿರುವ ಬಾಂಗ್ಲಾ ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೋರಾಟ ಪ್ರದರ್ಶಿಸುವುದಾಗಿ ಹೇಳಿಕೊಂಡಿದೆ.
ಭಾರತ ಫೇವರಿಟ್: 6 ತಿಂಗಳ ಬಳಿಕ ಟೆಸ್ಟ್ ಆಡುತ್ತಿದ್ದರೂ, ಭಾರತವೇ ಗೆಲ್ಲುವ ಫೇವರಿಟ್ ಎನಿಸಿಕೊಂಡು ಸರಣಿಗೆ ಕಾಲಿಡಲಿದೆ. ಅತ್ಯಂತ ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಪಡೆಯನ್ನು ಹೊಂದಿರುವ ಭಾರತ, ನಿರಾಯಾಸವಾಗಿ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಸಾಮಾನ್ಯವಾಗಿ ತವರಿನಲ್ಲಿ ಆಡುವಾಗ ಭಾರತ ತಂಡ 3 ಸ್ಪಿನ್ನರ್ಸ್ ಹಾಗೂ 2 ವೇಗಿಗಳೊಂದಿಗೆ ಆಡಲಿದೆ. ಈ ಪಂದ್ಯದಲ್ಲೂ ಅದೇ ಸಂಯೋಜನೆಗೆ ಮಣೆ ಹಾಕಬಹುದು. ಒಂದು ವೇಳೆ 3ನೇ ವೇಗಿಯನ್ನು ಆಡಿಸಲು ನಿರ್ಧರಿಸಿದರೆ, ಆಕಾಶ್‌ದೀಪ್‌ಗೆ ಸ್ಥಾನ ಸಿಗಬಹುದು.
ಬಾಂಗ್ಲಾದೇಶ ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಬಾಂಗ್ಲಾ ಸಹ ಮೂವರು ಗುಣಮಟ್ಟದ ಸ್ಪಿನ್ನರ್ ಗಳೊಂದಿಗೆ ಭಾರತಕ್ಕೆ ಆಗಮಿಸಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಎದುರು ನೋಡುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ಭಾರತ ಚಿತ್ತ
ಮೊದಲೆರಡು ಆವೃತ್ತಿಗಳ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ಆಡಿದ್ದ ಭಾರತ, ಸದ್ಯ 2023-25ರ ಅವಧಿಯ ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಶೇ.68.52 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡ ಸದ್ಯ ಇರುವ ಲಯವನ್ನು ಗಮನಿಸಿದಾಗ ಸತತ 3ನೇ ಬಾರಿಗೆ ಫೈನಲ್‌ಗೇರಿದರೆ ಅಚ್ಚರಿಯಿಲ್ಲ. ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್‌ಗಳನ್ನು ಆಡಲಿರುವ ಭಾರತ, ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್‌ಗಳನ್ನು ಆಡಲಿದೆ. ಒಟ್ಟಾರೆ 10 ಪಂದ್ಯಗಳಲ್ಲಿ ಕನಿಷ್ಠ 6-7 ಪಂದ್ಯಗಳಲ್ಲಿ ಗೆದ್ದರೆ ಭಾರತ ಫೈನಲ್ ಪ್ರವೇಶಿಸಲಿದೆ.
2012ರಿಂದ ತವರಿನಲ್ಲಿ ಸರಣಿ ಸೋತಿಲ್ಲ ಭಾರತ!
ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಕಳೆದ 10 ವರ್ಷಗಳಲ್ಲಿ ಕೇವಲ 4 ಟೆಸ್ಟ್ ಪಂದ್ಯಗಳಲ್ಲಷ್ಟೇ ಸೋತಿದೆ. ಇನ್ನು ಟೀಂ ಇಂಡಿಯಾ ತವರಿನಲ್ಲಿ ಸರಣಿ ಸೋತು 12 ವರ್ಷಗಳೇ ಆಗಿವೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಭಾರತ ಸತತ 17 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ.
ರಾಹುಲ್ ದ್ರಾವಿಡ್‌ರ ಕೋಚಿಂಗ್ ಶೈಲಿಗೂ ಗೌತಮ್ ಗಂಭೀರ್‌ರ ಕೋಚಿಂಗ್ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ,ಕೆ.ಎಲ್.ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಕುಲೀಪ್ ಯಾದವ್, ಮೊಹಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ,
ಬಾಂಗ್ಲಾದೇಶ: ಶಮ್ಮನ್ ಇಸ್ಲಾಂ, ಝಾಕಿರ್ ಹಸನ್, ನಜ್ರುಲ್ ಶಾಂತೋ(ನಾಯಕ), ಮೊಮಿನುಲ್ ಇಸ್ಲಾಂ, ಮುಷ್ಟಿಕುರ್ ರಹೀಂ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮೆಹಿದಿ ಹಸನ್, ಟಸ್ಕಿನ್ ಅಹ್ಮದ್, ಹಸನ್ ಮಹ್ಮುದ್, ನಹಿದ್/ತೈಜುಲ್.
ಪಿಚ್ ರಿಪೋರ್ಟ್: ಚೆಪಾಕ್‌ನ ಕೆಂಪು ಮಣ್ಣಿನ ಪಿಚ್ ಅನ್ನು ಆಯ್ಕೆ ಮಾಡಲಾಗಿದ್ದು, ವೇಗಿಗಳು ಹಾಗೂ ಸ್ಪಿನ್ನರ್ಸ್ ಇಬ್ಬರಿಗೂ ನೆರವು ದೊರೆಯಲಿದೆ. ಆದರೆ ಚೆನ್ನೈನ ಉರಿ ಬಿಸಿಲಿಗೆ ಪಿಚ್ ಬಹಳ ಬೇಗ ಬಿರುಕು ಬಿಡಲು ಆರಂಭಿಸಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್ಸ್‌ಗಳ ಪಾತ್ರ ನಿರ್ಣಾಯಕವಾಗಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ