Ind vs Ban ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಪಂತ್..! ಸಿಕ್ಸರ್‌ನಲ್ಲೂ ಹೊಸ ದಾಖಲೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ ರಿಷಭ್ ಪಂತ್
ಈ ಸಾಧನೆ ಮಾಡಿದ ಭಾರತದ ಎರಡನೇ ವಿಕೆಟ್ ಕೀಪರ್ ಪಂತ್
ಸಿಕ್ಸರ್ ಬಾರಿಸುವುದರಲ್ಲೂ ಹೊಸ ದಾಖಲೆ ಬರೆದ ರಿಷಭ್ ಪಂತ್
ಚಟ್ಟೋಗ್ರಾಮ್(ಡಿ.14): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಇದೇ ಟೆಸ್ಟ್ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000+ ರನ್ ಬಾರಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಟ್ಟು 535 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿ 44.74ರ ಬ್ಯಾಟಿಂಗ್ ಸರಾಸರಿಯಲ್ಲಿ 15 ಶತಕ ಹಾಗೂ 108 ಅರ್ಧಶತಕ ಸಹಿತ 17,092 ರನ್ ಬಾರಿಸಿದ್ದಾರೆ. ಇನ್ನು ಇದೀಗ ಭಾರತ ಪರ 128ನೇ ಪಂದ್ಯವನ್ನಾಡಿದ ರಿಷಭ್ ಪಂತ್ 33.78ರ ಬ್ಯಾಟಿಂಗ್ ಸರಾಸರಿಯಲ್ಲಿ 4,021 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 15 ಅರ್ಧಶತಕಗಳು ಸೇರಿವೆ.
Ind vs Ban: ಮೊದಲ ಟೆಸ್ಟ್, ಬಾಂಗ್ಲಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಬುಧವಾರದಿಂದ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್, ಕೇವಲ 45 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಷ್ಟೇ ಅಲ್ಲದೇ ನಾಲ್ಕನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ ಜತೆಗೂಡಿ 64 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಸಿಕ್ಸರ್‌ನಲ್ಲಿ ಹೊಸ ದಾಖಲೆ: ಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾದ ರಿಷಭ್ ಪಂತ್, ಕೇವಲ 54 ಟೆಸ್ಟ್ ಇನಿಂಗ್ಸ್‌ಗಳನ್ನಾಡಿ 50 ಸಿಕ್ಸರ್ ಸಿಡಿಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ಗಳನ್ನಾಡಿ ವೇಗಿವಾಗಿ 50 ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟರ್ ಎನ್ನುವ ಹಿರಿಮೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಂತ್ ಇದೀಗ 4ನೇ ಸ್ಥಾನಕ್ಕೇರಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಆಡಂ ಗಿಲ್‌ಕ್ರಿಸ್ಟ್(100), ಎಂ ಎಸ್ ಧೋನಿ(78), ಬ್ರಾಡ್ ಹಡ್ಡೀನ್(54) ಮೊದಲ 3 ಸ್ಥಾನದಲ್ಲಿದ್ದಾರೆ.
ಶ್ರೇಯಸ್-ಪೂಜಾರ ಫಿಫ್ಟಿ, ಬೃಹತ್ ಮೊತ್ತದತ್ತ ಭಾರತ: ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 48 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಸದ್ಯ 63 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿದ್ದು, ಚೇತೇಶ್ವರ್ ಪೂಜಾರ 61 ಹಾಗೂ ಶ್ರೇಯಸ್ ಅಯ್ಯರ್ 52 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.