Ind vs Ban: ಮೊದಲ ಟೆಸ್ಟ್, ಬಾಂಗ್ಲಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಭಾರತ-ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭ
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ
ಮೂರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದ ಭಾರತ
ಚಟ್ಟೋಗ್ರಾಮ್(ಡಿ.14): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವಲ್ಲಿ ಟೀಂ ಇಂಡಿಯಾ ಪಾಲಿಗೆ ಈ ಸರಣಿ ಸಾಕಷ್ಟು ಮಹತ್ವದ್ದೆನಿಸಿದ್ದು, ಇಬ್ಬರು ವೇಗಿಗಳು, ಮೂವರು ಸ್ಪಿನ್ನರ್‌ಗಳು ಹಾಗೂ ಆರು ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿದೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಝಹೂರ್ ಅಹಮದ್ ಚೌಧರಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಇಂಗ್ಲೆಂಡ್ ಎದುರು ಪಾಕಿಸ್ತಾನ ತಂಡವು ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಆಸೆಗೆ ಮತ್ತಷ್ಟು ಬಲ ಬಂದಿದೆ. ಭಾರತ ತಂಡವು ಬಾಂಗ್ಲಾದೇಶ ಎದುರು ಎರಡು ಟೆಸ್ಟ್ ಹಾಗೂ ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಯ ಪೈಕಿ 5 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದರೆ ಅನಾಯಾಸವಾಗಿ ಸತತ ಎರಡನೇ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಇನ್ನು ಭಾರತ ತಂಡವು ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಹೀಗೆ ಮೂವರು ತಜ್ಞ ಸ್ಪಿನ್ನರ್‌ಗಳು, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರು ವೇಗಿಗಳ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದು, ಶುಭ್‌ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಬೇಕಿದೆ.
Ind vs Ban: ಇಂದು ಭಾರತ-ಬಾಂಗ್ಲಾ ಮೊದಲ ಟೆಸ್ಟ್ ಕದನ ಆರಂಭ
ಇನ್ನು ಬಾಂಗ್ಲಾದೇಶ ತಂಡದ ಪರ ಝಾಕಿರ್ ಹಸನ್, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪರ ಟೆಸ್ಟ್ ಪಂದ್ಯವನ್ನಾಡುತ್ತಿರುವ 101ನೇ ಟೆಸ್ಟ್ ಆಟಗಾರ ಎನ್ನುವ ಹಿರಿಮೆಗೆ ಝಾಕಿರ್ ಹಸನ್ ಪಾತ್ರರಾಗಿದ್ದಾರೆ. ಝಾಕಿರ್ ಹಸನ್, ದೇಶಿ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಬಾಂಗ್ಲಾದೇಶ ತಂಡವು ಕೂಡಾ ಮೂವರು ಸ್ಪಿನ್ನರ್‌ಗಳು, ಇಬ್ಬರು ವೇಗಿಗಳು ಹಾಗೂ 7 ತಜ್ಞ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿದೆ.
ತಂಡಗಳು ಹೀಗಿವೆ ನೋಡಿ
ಭಾರತ: ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್(ನಾಯಕ), ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ, ಲಿಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಮುಷ್ಫಿಕುರ್ ರಹೀಂ, ಯಾಸಿರ್ ಅಲಿ, ನೂರುಲ್ ಹಸನ್(ವಿಕೆಟ್ ಕೀಪರ್), ಮೆಹದಿ ಹಸನ್ ಮಿರಜ್, ತೈಜುಲ್ ಇಸ್ಲಾಂ, ಖಾಲಿದ್ ಅಹಮದ್, ಎಬೊದತ್ ಹೊಸೈನ್