Asianet Suvarna News Asianet Suvarna News

ರಿಂಕು-ನಿತೀಶ್ ಅಬ್ಬರಕ್ಕೆ ಬಾಂಗ್ಲಾದೇಶ ತಬ್ಬಿಬ್ಬು; ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆದ್ದ ಭಾರತ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ರಿಪೋರ್ಟ್ಇಲ್ಲಿದೆ ನೋಡಿ

Ind vs Ban Nitish Reddy Rinku Singh muscle India to a convincing series win against Bangladesh kvn
Author
First Published Oct 10, 2024, 9:56 AM IST | Last Updated Oct 10, 2024, 9:56 AM IST

ನವದೆಹಲಿ: ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತನ್ನ ಬೆಂಚ್‌ ಬಲವನ್ನು ಪ್ರದರ್ಶಿಸಿ, ಮುಂದಿನ ಕೆಲ ವರ್ಷಗಳ ಕಾಲ 20 ಓವರ್‌ಗಳ ಕ್ರಿಕೆಟ್‌ನಲ್ಲಿ ಪರಾಕ್ರಮ ಮೆರೆಯುವುದಾಗಿ ಸಂದೇಶ ರವಾನಿಸಿದೆ. ಬುಧವಾದ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ 110 ರನ್‌ಗಳ ಬೃಹತ್‌ ಗೆಲುವು ಸಾಧಿಸಿದ ಭಾರತ, 2-0 ಮುನ್ನಡೆ ಸಾಧಿಸಿ 3 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.

ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತೀಯ ಬ್ಯಾಟರ್‌ಗಳಿಂದ 2ನೇ ಪಂದ್ಯದಲ್ಲೂ ಸೂಪರ್‌ ಹಿಟ್‌ ಶೋ ಮೂಡಿಬಂತು. 41 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಹೊರತಾಗಿಯೂ 20 ಓವರಲ್ಲಿ ಭಾರತ 9 ವಿಕೆಟ್‌ಗೆ 221 ರನ್‌ ಕಲೆ ಹಾಕಿತು.

21 ವರ್ಷದ ಆಲ್ರೌಂಡರ್‌ ನಿತೀಶ್‌ ರೆಡ್ಡಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ 34 ಎಸೆತದಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 74 ರನ್‌ ಸಿಡಿಸಿದರೆ, ರಿಂಕು ಸಿಂಗ್‌ 29 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್‌ ಚಚ್ಚಿದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 8 ಓವರಲ್ಲಿ 108 ರನ್‌ ಜೊತೆಯಾಟ ಮೂಡಿಬಂತು.

ಹಾರ್ದಿಕ್‌ ಪಾಡ್ಯ 19 ಎಸೆತದಲ್ಲಿ 32, ರಿಯಾನ್‌ ಪರಾಗ್‌ 6 ಎಸೆತದಲ್ಲಿ 15 ರನ್‌ ಸಿಡಿಸಿದರು. ಭಾರತದ ಇನ್ನಿಂಗ್ಸಲ್ಲಿ ಒಟ್ಟು 17 ಬೌಂಡರಿ, 15 ಸಿಕ್ಸರ್‌ಗಳಿದ್ದವು.

ಬಾಂಗ್ಲಾ ಕುಸಿತ: ಭಾರತೀಯ ವೇಗಿಗಳ ಸಂಘಟಿತ ದಾಳಿಯ ಎದುರು ಬಾಂಗ್ಲಾ ಪ್ರಬಲ ಹೋರಾಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪವರ್‌-ಪ್ಲೇನಲ್ಲೇ 3 ವಿಕೆಟ್‌ ಕಳೆದುಕೊಂಡ ಬಾಂಗ್ಲಾ, ಬಳಿಕ ಚೇತರಿಕೆ ಕಾಣಲಿಲ್ಲ. ಏಕಾಂಗಿ ಹೋರಾಟ ನಡೆಸಿದ ಮಹ್ಮುದುಲ್ಲಾ 36 ರನ್‌ ಗಳಿಸಿದರು.

ಸರಣಿಯ 3ನೇ ಹಾಗೂ ಕೊನೆಯ ಪಂದ್ಯ ಅ.12ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಸ್ಕೋರ್‌: ಭಾರತ 20 ಓವರಲ್ಲಿ 221/9 (ನಿತೀಶ್‌ 74, ರಿಂಕು 53, ಪಾಂಡ್ಯ 32, ರಿಶಾದ್‌ 3-55), ಬಾಂಗ್ಲಾ 00.0 ಓವರಲ್ಲಿ 000/10 (ಮಹ್ಮುದುಲ್ಲಾ 36, ಪರ್ವೇಜ್‌ 16, ವರುಣ್‌ 2-19, ) ಪಂದ್ಯಶ್ರೇಷ್ಠ: ನಿತೀಶ್‌ ರೆಡ್ಡಿ

ಸತತ 7ನೇ ಟಿ20 ಸರಣಿ ಗೆಲುವು!

ಭಾರತ ತಂಡ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವು ಸಾಧಿಸಿದೆ. 2022ರ ಬಳಿಕ ತಂಡ ತವರಿನಲ್ಲಿ ಸರಣಿ ಸೋತಿಲ್ಲ. ಇನ್ನು ಡ್ರಾಗೊಂಡ ಸರಣಿಗಳನ್ನೂ ಪರಿಗಣಿಸಿದರೆ, ಭಾರತ ಸತತ 15ನೇ ಸರಣಿಯಲ್ಲಿ ಅಜೇಯವಾಗಿ ಉಳಿದಿದೆ.

Latest Videos
Follow Us:
Download App:
  • android
  • ios