ಇಂಗ್ಲೆಂಡ್ ಎದುರಿನ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬಾಬರ್ ಅಜಂ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಮುಲ್ತಾನ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಂ, ಇದೀಗ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲೂ ವೈಪಲ್ಯ ಅನುಭವಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಬರ್ ಅಜಂ 71 ಎಸೆತಗಳನ್ನು ಎದುರಿಸಿ ಕೇವಲ 30 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿರುವ ಮುಲ್ತಾನ್ ಪಿಚ್‌ನಲ್ಲೂ ರನ್ ಗಳಿಸಲು ಪರದಾಡಿದ ಬಾಬರ್ ಅಜಂ ವಿರುದ್ಧ ನೆಟ್ಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನೆಟ್ಟಿಗರಿಗೆ ಉತ್ತರ ನೀಡಲು ಬಳಸಿಕೊಳ್ಳಬೇಕಿದ್ದ ಮತ್ತೊಂದು ಸುವರ್ಣಾವಕಾಶವನ್ನು ಬಾಬರ್ ಅಜಂ ಕೈಚೆಲ್ಲಿದ್ದಾರೆ. ಇಂಗ್ಲೆಂಡ್ ಎದುರು ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಈ ಮೂಲಕ ಬಾಬರ್ ಅಜಂ ಕಳೆದ 17 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 50+ ರನ್ ಗಳಿಸಲು ವಿಫಲವಾಗುವ ಮೂಲಕ ಮುಖಭಂಗ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಬಾಬರ್ ಅಜಂ ಟೆಸ್ಟ್ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲು ಇದು ಸಕಾಲ ಎಂದು ಟ್ರೋಲ್ ಮಾಡಿದ್ದಾರೆ.
ಇಂದು ಆಸೀಸ್-ಕಿವೀಸ್ ಹೈವೋಲ್ಟೇಜ್ ಫೈಟ್; ಯಾವ ತಂಡ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆಗೆ ಲಾಭ?
ಮುಲ್ತಾನ್‌ನ ಪ್ಲಾಟ್ ಪಿಚ್‌ನಲ್ಲಿ ಪಾಕಿಸ್ತಾನದ ನಾಯಕ ಶಾನ್ ಮಸೂದ್ ಆಕರ್ಷಕ 151 ರನ್ ಸಿಡಿಸಿದರೆ, ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕ್ 102 ಆಕರ್ಷಕ ಶತಕ ಸಿಡಿಸುವ ಮೂಲಕ ಮಿಂಚಿದರು. ಆದರೆ ಬಾಬರ್ ಅಜಂ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಧಾರಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡವು ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 515 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ. ಅಗಾ ಸಲ್ಮಾನ್ 79 ಹಾಗೂ ಶಾಹೀನ್ ಅಫ್ರಿದಿ 13 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
