2017ರ ಬಳಿಕ ಸ್ಥಗಿತಗೊಂಡಿದ್ದ ಹಾಂಕಾಂಗ್ ಸಿಕ್ಸ್ ಟೂರ್ನಿಯು ಈ ಬಾರಿ ಪುನರಾರಂಭವಾಗಲಿದೆ. ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತ ಕ್ರಿಕೆಟ್ ತಂಡ ಈ ಬಾರಿ ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ತಲಾ 6 ಆಟಗಾರರೊಂದಿಗೆ ಆಡುವ ಟೂರ್ನಿ ನ.1ರಿಂದ 3ರ ವರೆಗೆ ಹಾಂಕಾಂಗ್‌ನಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ.
ಈ ಟೂರ್ನಿಯನ್ನು 1993ರಿಂದಲೂ ಹಾಂಕಾಂಗ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಕೆಲ ಆವೃತ್ತಿಗಳಲ್ಲಿ ಭಾರತ ಆಡಿದ್ದು, 2005ರಲ್ಲಿ ಚಾಂಪಿಯನ್ ಆಗಿತ್ತು. ಆದರೆ 2017ರ ಬಳಿಕ ಟೂರ್ನಿ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿ ಸಾಧಾರಣ ಕ್ರಿಕೆಟ್ ಪಂದ್ಯಕ್ಕಿಂತ ವಿಭಿನ್ನವಾದ ನಿಯಮಗಳನ್ನು ಹೊಂದಿದೆ.
ಹಾಂಕಾಂಗ್ ಸಿಕ್ಸ್ ಟೂರ್ನಮೆಂಟ್‌ನಲ್ಲಿ ಖ್ಯಾತ ಕ್ರಿಕೆಟಿಗರಾದ ಎಂ ಎಸ್ ಧೋನಿ, ವಾಸೀಂ ಅಕ್ರಂ, ಶೋಯೆಬ್ ಮಲಿಕ್, ಸನತ್ ಜಯಸೂರ್ಯ, ಅನಿಲ್ ಕುಂಬ್ಳೆ, ಉಮರ್ ಅಕ್ಮಲ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಹಲವು ತಾರಾ ಕ್ರಿಕೆಟಿಗರು ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ನೀವು ಗಂಭೀರ್ ಕಾಲು ನೆಕ್ಕುತ್ತಿದ್ದೀರಿ: ಕ್ರೀಡಾ ತಜ್ಞರ ಹೊಗಳಿಕೆಗೆ ಗವಾಸ್ಕರ್ ಕಿಡಿ
ನಿಯಮಗಳೇನು?
1. ಪ್ರತಿ ತಂಡದಲ್ಲಿ ಆರು ಆಟಗಾರರು. ತಲಾ 5 ಓವರ್ ಆಟ. ಫೈನಲ್‌ನಲ್ಲಿ ಮಾತ್ರ ಪ್ರತಿ ಓವರ್‌ಗೆ 8 ಎಸೆತ.
2. ವಿಕೆಟ್ ಕೀಪರ್ ಹೊರತುಪಡಿಸಿ ಬೇರೆಲ್ಲರೂ ತಲಾ 1 ಓವರ್ ಬೌಲ್ ಮಾಡಬೇಕು. ವೈಡ್, ನೋಬಾಲ್‌ಗೆ 2 ರನ್.
3. ತಂಡದ 5 ಬ್ಯಾಟರ್‌ಗಳು ಔಟಾದರೂ 6ನೇ ಬ್ಯಾಟರ್ ಆಟ ಮುಂದುವರಿಸುತ್ತಾರೆ. ಔಟಾಗದೇ ಇರುವ ಬ್ಯಾಟರ್ ಎಲ್ಲಾ ಸಮಯದಲ್ಲೂ ಸ್ಟ್ರೈಕ್‌ನಲ್ಲಿರಬೇಕು. ಮತ್ತೋರ್ವ ಆಟಗಾರ ಕೇವಲ ರನ್ನರ್ ಆಗಿರುತ್ತಾರೆ. 6ನೇ ಬ್ಯಾಟರ್ ಔಟಾದರೆ ಮಾತ್ರ ತಂಡ ಆಲೌಟ್.
ಮತ್ತೊಂದು ಟಿ20 ಲೀಗ್ ಶುರು
ಗಯಾನಾ: ಮತ್ತೊಂದು ಟಿ20 ಕ್ರಿಕೆಟ್ ಲೀಗ್ ಶೀಘ್ರ ಆರಂಭಗೊಳ್ಳಲಿದೆ. ಗ್ಲೋಬಲ್ ಸೂಪರ್ ಲೀಗ್‌ಗೆ ವಿಂಡೀಸ್ ಕ್ರಿಕೆಟ್ ಮಂಡಳಿ ನ.26ಕ್ಕೆ ಚಾಲನೆ ನೀಡಲಿದೆ. ಡಿ.7ರ ವರೆಗೂ ನಡೆಯಲಿರುವ ಲೀಗ್‌ನಲ್ಲಿ 5 ದೇಶಗಳ ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 11 ಪಂದ್ಯಗಳು ನಡೆಯಲಿವೆ.
10 ವರ್ಷಗಳ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೇವಲ 3 ವರ್ಷದಲ್ಲೇ ಬ್ರೇಕ್ ಮಾಡಲು ಸೂರ್ಯಕುಮಾರ್ ರೆಡಿ
ಅಮೆರಿಕದ ರಾಷ್ಟ್ರೀಯ ಕ್ರಿಕೆಟ್ ಲೀಗ್‌ಗೆ ಸಚಿನ್
ವಾಷಿಂಗ್ಟನ್: ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಮೆರಿಕದ ನ್ಯಾಷನಲ್ ಕ್ರಿಕೆಟ್ ಲೀಗ್(ಎನ್‌ಸಿಎಲ್)ನ ಭಾಗವಾಗಿದ್ದಾರೆ. ಅವರು ಲೀಗ್‌ನಲ್ಲಿ ಪಾಲುದಾರಿಕೆ ಪಡೆದಿದ್ದು, ಮಾಲೀಕರ ಗುಂಪು ಸೇರ್ಪಡೆಗೊಂಡಿದ್ದಾರೆ. ಅಮೆರಿಕದಲ್ಲಿ ಕ್ರಿಕೆಟ್ ಬೆಳೆಸುವ ನಿಟ್ಟಿನಲ್ಲಿ ಸಚಿನ್ ಎನ್‌ಸಿಎಲ್ ಜೊತೆ ಕೈಜೋಡಿಸಿದ್ದಾರೆ.
ಬಾಂಗ್ಲಾ ಆಟಗಾರರಿಗೆ ಕಪ್ಪು ಬಾವುಟ ಪ್ರದರ್ಶನ
ಗ್ವಾಲಿಯರ್: ಭಾರತ ವಿರುದ್ಧ ಮೊದಲ ಟಿ20 ಪಂದ್ಯಕ್ಕೂ ಬಾಂಗ್ಲಾದೇಶ ಆಟಗಾರರಿಗೆ ಗ್ವಾಲಿಯರ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಭಾನುವಾರ ಗ್ವಾಲಿಯರ್ ಬಂದ್‌ಗೆ ಹಿಂದೂ ಮಹಾಸಭಾ ಕರೆ ಕೊಟ್ಟಿತ್ತು. ಬಂದ್ ವಿಫಲವಾದರೂ, ಬಾಂಗ್ಲಾ ಆಟಗಾರರು ಮೈದಾನಕ್ಕೆ ಆಗಮಿಸುವ ವೇಳೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
