Ind vs Ban ಬಾಂಗ್ಲಾದೇಶ ಎದುರು ಸರಣಿ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿದ್ದೇನು..?
* ಭಾರತ-ಬಾಂಗ್ಲಾದೇಶ ನಡುವಿನ ಏಕದಿನ ಸರಣಿ ಬಾಂಗ್ಲಾ ಪಾಲು
* ಮಾಡು ಇಲ್ಲವೇ ಮಡು ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ
* ಟೀಂ ಇಂಡಿಯಾ ಸೋಲಿಗೆ ಕಾರಣ ಬಿಚ್ಚಿಟ್ಟ ನಾಯಕ ರೋಹಿತ್ ಶರ್ಮಾ
ಢಾಕಾ(ಡಿ.08): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯ ಬಾಂಗ್ಲಾದೇಶ ತಂಡವು 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಪಾಲಿಗೆ ಎರಡನೇ ಏಕದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ರೋಚಕ ಸೋಲು ಅನುಭವಿಸುವ ಮೂಲಕ ಸರಣಿ ಕೈಚೆಲ್ಲಿದೆ. ಸೋಲಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ, ಪಂದ್ಯ ಸೋತಿದ್ದೆಲ್ಲಿ ಎನ್ನುವುದರ ಬಗ್ಗೆ ತುಟಿಬಿಚ್ಚಿದ್ದಾರೆ.
ಪರಿಣಾಮಕಾರಿಯಲ್ಲದ ಮಧ್ಯಮ ಓವರ್‌ಗಳು ಹಾಗೂ ಬ್ಯಾಟರ್‌ಗಳ ದೊಡ್ಡ ಮೊತ್ತದ ಜತೆಯಾದ ಕೊರತೆಯೇ ಟೀಂ ಇಂಡಿಯಾ ಸೋಲಿಗೆ ಕಾರಣ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. "ಒಂದು ಪಂದ್ಯ ಸೋತರೆ ಅದರಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಇರುತ್ತವೆ. 69 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದರಿಂದ ಹಿಡಿದು 270+ ರನ್ ಬಿಟ್ಟುಕೊಟ್ಟಿದ್ದರವರೆಗೆ. ಕೊನೆಯಲ್ಲಿ ಬೌಲರ್‌ಗಳ ಪ್ರಯತ್ನ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾವು ಆರಂಭದಲ್ಲಿ ಉತ್ತಮವಾಗಿಯೇ ಬೌಲಿಂಗ್ ಮಾಡಿದೆವು. ಆದರೆ ಮಧ್ಯಮ ಓವರ್‌ಗಳು ಹಾಗೂ ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಸಾಕಷ್ಟು ದುಬಾರಿಯಾದೆವು. ಕಳೆದ ಪಂದ್ಯದಲ್ಲೂ ಹೀಗೆಯೇ ಆಗಿತ್ತು. ಈ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಿದೆ" ಎಂದು ಎರಡನೇ ಪಂದ್ಯ ಸೋಲಿನ ಬಳಿಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, "ಏಕದಿನ ಕ್ರಿಕೆಟ್ ಮಾದರಿಯ ಬಗ್ಗೆ ಹೇಳಬೇಕೆಂದರೆ, ಜತೆಯಾಟ ಸಾಕಷ್ಟು ಮಹತ್ವದ್ದಾಗುತ್ತದೆ. ಒಂದು ಜತೆಯಾಟ ಮೂಡಿ ಬರುತ್ತಿದೆ ಎಂದಾದರೇ ಆ ಜತೆಯಾಟವನ್ನು ಮ್ಯಾಚ್ ವಿನ್ನಿಂಗ್ ಜತೆಯಾಟವಾಗಿ ಬದಲಾಯಿಸಬೇಕು. ಅವರು ಹಾಗೆಯೇ ಮಾಡಿದರು" ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.
ನೀವು 70 ರನ್‌ಗಳ ಜತೆಯಾಟವಾಡಿದ್ದೀರಾ ಎಂದರೆ ಅದನ್ನು 110-120 ರನ್‌ಗಳವರೆಗೆ ಆ ಜತೆಯಾಟ ಮುಂದುವರೆಯುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಹೊಸ ಬ್ಯಾಟರ್ ಬಂದ ತಕ್ಷಣ ದೊಡ್ಡ ಜತೆಯಾಟವಾಡುವುದು ಸುಲಭವಲ್ಲ. ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ತೋರುವ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಹೆಬ್ಬೆರಳಿಗೆ ಗಂಭೀರ ಗಾಯವಾದರೂ, ಗೆಲುವಿಗಾಗಿ ಕ್ರೀಸ್‌ಗಿಳಿದ ರೋಹಿತ್ ಶರ್ಮ!
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಒಂದು ಹಂತದಲ್ಲಿ ಬಾಂಗ್ಲಾದೇಶ ತಂಡವು 69 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಮೆಹದಿ ಹಸನ್(100*) ಹಾಗೂ ಮೊಹಮ್ಮದುಲ್ಲಾ(77) ಬರೋಬ್ಬರಿ 148 ರನ್‌ಗಳ ಜತೆಯಾಟವಾಡುವ ಮೂಲಕ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
ರೋಹಿತ್ ಗಾಯಗೊಂಡ ಕಾರಣ ಧವನ್ ಜೊತೆ ಕೊಹ್ಲಿ ಇನ್ನಿಂಗ್‌್ಸ ಆರಂಭಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. 65 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಶ್ರೇಯಸ್(82) ಹಾಗೂ ಅಕ್ಷರ್(56)ರ ಅರ್ಧಶತಕಗಳು ಆಸರೆಯಾದವು. ಕೊನೆಯಲ್ಲಿ ರೋಹಿತ್(28 ಎಸೆತದಲ್ಲಿ 51 ರನ್) ಬ್ಯಾಟಿಂಗ್‌ಗಿಳಿದು ಸ್ಫೋಟಕ ಆಟವಾಡಿದರೂ, 48ನೇ ಓವರಲ್ಲಿ ಸಿರಾಜ್ ಒಂದೂ ರನ್ ಗಳಿಸದೆ ಇದ್ದಿದ್ದು ಭಾರತಕ್ಕೆ ಮುಳುವಾಯಿತು.