ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಭಾರತ ತಂಡ ಕೂಡಿಕೊಂಡ ಇಶಾನ್ ಕಿಶನ್, ಕುಲ್ದೀಪ್ ಯಾದವ್

ಛಟ್ಟೋಗ್ರಾಮ(ಡಿ.10): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸರಣಿಯ ಮೂರು ಪಂದ್ಯಗಳಲ್ಲೂ ಬಾಂಗ್ಲಾದೇಶ ತಂಡವು ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ನಿರೀಕ್ಷೆಯಂತೆಯೇ ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಇಲ್ಲಿನ ಝಹೂರ್ ಅಹಮದ್ ಚೌಧರಿ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗಿದ್ದು, ರೋಹಿತ್ ಶರ್ಮಾ ಹಾಗೂ ದೀಪಕ್ ಚಹರ್‌ ಬದಲಿಗೆ ಇಶಾನ್ ಕಿಶನ್ ಹಾಗೂ ಕುಲ್ದೀಪ್ ಯಾದವ್ ಭಾರತ ತಂಡ ಕೂಡಿಕೊಂಡಿದ್ದಾರೆ. ಇನ್ನು ಈಗಾಗಲೇ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ಆತಿಥೇಯ ಬಾಂಗ್ಲಾದೇಶ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ಟಸ್ಕಿನ್ ಅಹಮ್ಮದ್ ಹಾಗೂ ಯಾಸಿರ್ ಅಲಿ ಬಾಂಗ್ಲಾದೇಶ ತಂಡ ಕೂಡಿಕೊಂಡಿದ್ದಾರೆ.

Scroll to load tweet…

ಭಾರತ ತಂಡದ ಪಾಲಿಗೆ ಬಾಂಗ್ಲಾದೇಶ ಎದುರಿನ ಮೂರನೇ ಪಂದ್ಯವು ಪ್ರತಿಷ್ಠೆಯ ಪಂದ್ಯವಾಗಿ ಪರಿಣಮಿಸಿದೆ. ಹೀಗಾಗಿ ಕೊನೆಯ ಪಂದ್ಯ ಗೆದ್ದ ವೈಟ್‌ವಾಶ್ ಮುಖಭಂಗದಿಂದ ಪಾರಾಗಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಹಾಗೂ ಇಶಾನ್ ಕಿಶನ್ ಇನಿಂಗ್ಸ್‌ ಆರಂಭಿಸಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಕಡೆ ಘಳಿಗೆಯಲ್ಲಿ ತಂಡ ಕೂಡಿಕೊಂಡಿರುವ ಕುಲ್ದೀಪ್ ಯಾದವ್ ಜತೆಗೆ ಯುವ ವೇಗಿ ಉಮ್ರಾನ್ ಮಲಿಕ್ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

Ind vs Ban ಬಾಂಗ್ಲಾ ಎದುರು ವೈಟ್‌ವಾಶ್‌ನಿಂದ ಪಾರಾಗುತ್ತಾ ಟೀಂ ಇಂಡಿಯಾ?

ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಒಂದು ವಿಕೆಟ್ ರೋಚಕ ಜಯ ಸಾಧಿಸಿದೆ. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ 5 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಬಾಂಗ್ಲಾದೇಶ ತಂಡವು ಇದುವರೆಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಎದುರು ಸರಣಿ ಕ್ಲೀನ್‌ ಸ್ವೀಪ್ ಸಾಧಿಸಿಲ್ಲ. ಹೀಗಾಗಿ ಭಾರತ ಎದುರು ಮೂರನೇ ಪಂದ್ಯ ಗೆದ್ದು ಸರಣಿ ವೈಟ್‌ವಾಷ್ ಮಾಡುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಡಲು ಎದುರು ನೋಡುತ್ತಿದೆ.

ತಂಡಗಳು ಹೀಗಿವೆ ನೋಡಿ:

ಭಾರತ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ನಾಯಕ&ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ: ಯಾಸಿರ್ ಅಲಿ, ಲಿಟನ್ ದಾಸ್(ನಾಯಕ), ಅನ್ಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೊಹಮದುಲ್ಲಾ, ಅಫಿಫ್ ಹೊಸೈನ್, ಮೆಹದಿ ಹಸನ್ ಮಿರಜ್, ನಸುಮ್ ಅಹಮನ್, ಎಬೊದತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹಮ್ಮದ್.

ಪಂದ್ಯ: ಬೆಳಗ್ಗೆ 11.30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್