2027ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲಿರುವ ನಾಲ್ಕು ತಂಡಗಳ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಅಲಿಸ್ಟೈರ್ ಕುಕ್ ಭವಿಷ್ಯ ನುಡಿದಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಅವರು ತಮ್ಮ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಜೊತೆಗೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್‌ನಲ್ಲೂ ಆಡಬೇಕೆಂದು ಆಶಿಸಿದ್ದಾರೆ.

ಬೆಂಗಳೂರು(ನ.29): 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಯಾವ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಬಹುದು ಎಂಬ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಿಸ್ಟೈರ್ ಕುಕ್ ಭವಿಷ್ಯ ನುಡಿದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಇಂಗ್ಲೆಂಡ್, ನ್ಯೂಜಿಲೆಂಡ್, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳೇ 2027ರಲ್ಲೂ ಅಗ್ರ ನಾಲ್ಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ಚಳಿಗಾಲದ ಅವಧಿಯಲ್ಲಿ ನಡೆಯಲಿದೆ. ಸದ್ಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಇತ್ತ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲುವು ಸಾಧಿಸಿದ್ದರೂ, ಬೌಲಿಂಗ್ ವಿಭಾಗ ಇನ್ನೂ ಸ್ಥಿರತೆ ಕಂಡುಕೊಂಡಿಲ್ಲ. ಆಲ್‌ರೌಂಡರ್‌ಗಳ ಸ್ಥಾನಗಳಲ್ಲೂ ಕೆಲವು ಸಮಸ್ಯೆಗಳಿವೆ. ಹೀಗಾಗಿ 2027ರ ವಿಶ್ವಕಪ್‌ಗೂ ಮುನ್ನ ತಂಡಗಳು ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಸಾಬೀತುಪಡಿಸಬೇಕಿದೆ.

ಆತಿಥೇಯ ತಂಡಕ್ಕಿಲ್ಲ ಟಾಪ್-4 ಪಟ್ಟಿಯಲ್ಲಿ ಸ್ಥಾನ:

ವಿಶೇಷವೆಂದರೆ, 2027ರ ವಿಶ್ವಕಪ್‌ನ ಸಹ ಆತಿಥೇಯ ರಾಷ್ಟ್ರವಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕುಕ್ ತಮ್ಮ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. 2023ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ, ಈ ಬಾರಿ ತವರಿನಲ್ಲೇ ಟೂರ್ನಿ ಆಡಲಿದ್ದರೂ ಕುಕ್ ಆಯ್ಕೆಯಲ್ಲಿ ಕಾಣಿಸಿಕೊಂಡಿಲ್ಲ. ಹರಿಣಗಳ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹರಿಣಗಳ ಪಡೆಗೆ ಈ ಬಾರಿ ತವರಿನ ಬೆಂಬಲವೂ ಇದೆ. ಹೀಗಿದ್ದೂ ಕುಕ್, ದಕ್ಷಿಣ ಆಫ್ರಿಕಾ ತಂಡವು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಸೆಮೀಸ್‌ಗೇರೊಲ್ಲವೆಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಕುಕ್ ಭವಿಷ್ಯ:

“ನಾನು ನ್ಯೂಜಿಲೆಂಡ್, ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಆಯ್ಕೆ ಮಾಡುತ್ತೇನೆ,” ಎಂದು ಕುಕ್ ಹೇಳಿದ್ದಾರೆ. ಕಾಗದದ ಮೇಲಿನ ಸಾಮರ್ಥ್ಯವನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ ತಂಡವಾಗಿದೆ ಎಂದು ಕುಕ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ತಂಡ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿಲ್ಲ. ಮುಂಬರುವ ತಿಂಗಳುಗಳಲ್ಲಿ ಈ ಪರಿಸ್ಥಿತಿ ಬದಲಾಗಬಹುದು ಎಂದೂ ಅವರು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲೂ ವೈಭವ್ ಸೂರ್ಯವಂಶಿ ಆಡಬೇಕು: ಕುಕ್

ಇದೇ ಸಂದರ್ಶನದಲ್ಲಿ ಭಾರತದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಬಗ್ಗೆಯೂ ಅಲಿಸ್ಟೈರ್ ಕುಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವ ವೈಭವ್, ಟೆಸ್ಟ್ ಕ್ರಿಕೆಟ್‌ನಲ್ಲೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಪ್ರಯತ್ನಿಸಬೇಕು ಎಂಬುದು ಅವರ ಆಶಯ. ಪ್ರತಿ ಪೀಳಿಗೆಗೂ ಯುವ ಕ್ರಿಕೆಟಿಗರು ಸ್ಫೂರ್ತಿಯಾಗಿ ನೋಡುವಂತಹ ಒಬ್ಬ ಆಟಗಾರನ ಅಗತ್ಯವಿದೆ ಎಂದು ಕುಕ್ ಹೇಳಿದ್ದಾರೆ. ವೈಭವ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ತನ್ನ ಸಾಮರ್ಥ್ಯ ತೋರಿಸಿದರೆ ಟೆಸ್ಟ್ ಕ್ರಿಕೆಟ್‌ಗೂ ದೊಡ್ಡ ಉತ್ತೇಜನ ಸಿಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

“ಪ್ರತಿ ಪೀಳಿಗೆಗೂ ಮಕ್ಕಳು ಆದರ್ಶವಾಗಿ ನೋಡುವಂತಹ ಒಬ್ಬ ಸ್ಫೂರ್ತಿದಾಯಕ ಆಟಗಾರ ಬೇಕು. ವೈಭವ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಅದನ್ನು ಸಾಧಿಸಿದರೆ ಟೆಸ್ಟ್ ಕ್ರಿಕೆಟ್‌ಗೆ ದೊಡ್ಡ ಉತ್ತೇಜನ ಸಿಗಲಿದೆ. ವೈಭವ್ ಟೆಸ್ಟ್ ಕ್ರಿಕೆಟ್‌ನಲ್ಲೂ ತನ್ನ ಆಟದ ಮೂಲಕ ಪ್ರಭಾವ ಬೀರಿದರೆ ಅದನ್ನು ನೋಡಲು ನಾನು ಬಯಸುತ್ತೇನೆ. ವೈಟ್‌ಬಾಲ್ ಕ್ರಿಕೆಟ್‌ನಂತೆ ರೆಡ್‌ಬಾಲ್ ಕ್ರಿಕೆಟ್‌ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಬೇಕು,” ಎಂದು ಕುಕ್ ಹೇಳಿದ್ದಾರೆ.

“ನಾನು ಹಿಂದೆಂದೂ ನೋಡಿರದಂತಹ ಪ್ರತಿಭೆ ಅವರಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಾನು ಎಷ್ಟು ಉತ್ತಮವಾಗಿ ಆಡಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳುವ ಸವಾಲನ್ನು ಅವರು ಸ್ವೀಕರಿಸಲಿ ಎಂದು ಆಶಿಸುತ್ತೇನೆ. ಟೆಸ್ಟ್ ಕ್ರಿಕೆಟ್‌ಗೆ ಪ್ರಯತ್ನಿಸಲು ಸಿದ್ಧರಿರುವ ಆಟಗಾರರ ಅಗತ್ಯವಿದೆ. ಅವರು ಯಶಸ್ವಿಯಾಗದೇ ಇರಬಹುದು, ಅದರಲ್ಲಿ ತಪ್ಪೇನಿಲ್ಲ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅವರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅದೇ ರೀತಿ ಟೆಸ್ಟ್ ಕ್ರಿಕೆಟ್‌ನಲ್ಲೂ ಸಾಧನೆ ಮಾಡಲಿ ಎಂಬುದು ನನ್ನ ಆಶಯ. ಕ್ರಿಕೆಟ್‌ಗೆ ಇಂತಹ ಸ್ಫೂರ್ತಿದಾಯಕ ಆಟಗಾರನ ಅಗತ್ಯವಿದೆ,” ಎಂದು ಅಲಿಸ್ಟೈರ್ ಕುಕ್ ತಿಳಿಸಿದ್ದಾರೆ.