ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್‌ ಪಂದ್ಯ ಇಂದಿನಿಂದ ಆರಂಭರೋಹಿತ್‌ ಶರ್ಮಾ ಗೈರಿನಲ್ಲಿ ಕೆ ಎಲ್ ರಾಹುಲ್‌ಗೆ ನಾಯಕತ್ವಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಭಾರತಕ್ಕೆ ಮಹತ್ವದ ಸರಣಿ

ಚಿತ್ತಗಾಂಗ್(ಡಿ.14): ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ಬುಧವಾರದಿಂದ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯಕ್ಕೆ ಚಿತ್ತಗಾಂಗ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ರೋಹಿತ್‌ ಶರ್ಮಾ ಗಾಯಗೊಂಡ ಪಂದ್ಯದಿಂದ ಹೊರಬಿದ್ದಿದ್ದು, ಕೆ.ಎಲ್‌.ರಾಹುಲ್‌ ನಾಯಕತ್ವದ ಅಗ್ನಿಪರೀಕ್ಷೆಗೆ ಒಳಗಾಗಲಿದ್ದಾರೆ. ರೋಹಿತ್‌ರ ಆರಂಭಿಕ ಸ್ಥಾನಕ್ಕೆ ಅಭಿಮನ್ಯು ಈಶ್ವರನ್‌ ಹಾಗೂ ಗಿಲ್‌ ನಡುವೆ ಪೈಪೋಟಿ ಇದೆ. ಈಗಾಗಲೇ ರಾಹುಲ್‌ ತಂಡದಿಂದ ಆಕ್ರಮಣಕಾರಿ ಆಟವಾಡು ಬಗ್ಗೆ ಹೇಳಿಕೆ ನೀಡಿದ್ದು, ಕುತೂಹಲ ಸೃಷ್ಟಿಸಿದೆ. ಪೂಜಾರ, ಕೊಹ್ಲಿ, ಶ್ರೇಯಸ್‌, ಪಂತ್‌ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ. ಇನ್ನು ಬೂಮ್ರಾ, ಶಮಿ, ಜಡೇಜಾ ಅನುಪಸ್ಥಿತಿಯಲ್ಲಿ ಬೌಲಿಂಗ್‌ ಪಡೆ ಕೊಂಚ ದುರ್ಬಲವಾದಂತೆ ಕಂಡುಬರುತ್ತಿದೆ. ಉಮೇಶ್‌ ಯಾದವ್‌ ಜೊತೆ ಸಿರಾಜ್‌ ವೇಗದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಅಶ್ವಿನ್‌ ಜೊತೆ ಅಕ್ಷರ್‌ ಪಟೇಲ್‌ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಜಯದೇವ್ ಉನಾದ್ಕತ್ ವೀಸಾ ಸಮಸ್ಯೆಯಿಂದ ಇನ್ನೂ ಬಾಂಗ್ಲಾದೇಶಕ್ಕೆ ತಲುಪದಿರುವ ಜಯದೇವ್ ಉನಾದ್ಕತ್, ಭಾರತ ತಂಡದಿಂದ ಹೊರಬಿದ್ದಿದ್ದು, ಶಾರ್ದೂಲ್ ಠಾಕೂರ್ ಭಾರತ ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.

Ind vs Ban: ಮೊದಲ ಟೆಸ್ಟ್‌ಗೂ ಮುನ್ನ ಬಾಂಗ್ಲಾ ನಾಯಕ ಶಕೀಬ್ ಆಸ್ಪತ್ರೆಗೆ..!

ಇನ್ನು, ಭಾರತ ವಿರುದ್ಧ ಮೊದಲ ಟೆಸ್ಟ್‌ ಗೆಲುವಿನ ಕಾತರದಲ್ಲಿರುವ ಬಾಂಗ್ಲಾ ತವರಿನ ಪಿಚ್‌ನ ಲಾಭವೆತ್ತಲು ಎದುರು ನೋಡುತ್ತಿದೆ. ನಾಯಕ ಶಕೀಬ್‌ ಜೊತೆ ಮುಷ್ಫಿಕುರ್ರಹೀಂ, ಮೋಮಿನುಲ್‌ ಹಕ್‌ ಬ್ಯಾಟಿಂಗ್‌ ಪಡೆಗೆ ಬಲ ಒದಗಿಸಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿದ್ದು, ಟೀಂ ಇಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. 11 ಪಂದ್ಯಗಳ ಪೈಕಿ ಭಾರತ 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೇ ಇನ್ನೆರಡು ಪಂದ್ಯಗಳು ಡ್ರಾನಲ್ಲಿಅಂತ್ಯವಾಗಿದ್ದವು.
ಸಂಭವನೀಯ ಆಟಗಾರರ ಪಟ್ಟಿ:

ಭಾರತ: ಕೆ ಎಲ್ ರಾಹುಲ್‌, ಶುಭ್‌ಮನ್‌ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ರಿಷಭ್ ಪಂತ್‌, ರವಿಚಂದ್ರನ್ ಅಶ್ವಿನ್‌, ಅಕ್ಷರ್‌ ಪಟೇಲ್, ಶಾರ್ದೂಲ್ ಠಾಕೂರ್ ಉಮೇಶ್‌ ಯಾದವ್, ಮೊಹಮ್ಮದ್ ಸಿರಾಜ್‌,

ಬಾಂಗ್ಲಾದೇಶ: ನಜ್ಮುಲ್‌ ಹೊಸೈನ್ ಶಾಂಟೊ, ಅನಾಮುಲ್‌ ಹಕ್, ಮೋಮಿನುಲ್‌ ಹಕ್, ಶಕೀಬ್‌ ಅಲ್ ಹಸನ್(ನಾಯಕ), ಮುಷ್ಫಿಕುರ್ ರಹೀಂ, ಲಿಟನ್‌ ದಾಸ್, ಮೆಹದಿ ಹಸನ್, ಟಸ್ಕಿನ್‌ ಅಹಮದ್, ಶೊರಿಫುಲ್‌ ಹಸನ್, ಎಬದೊತ್‌ ಹೊಸೈನ್, ತೈಜುಲ್‌ ಇಸ್ಲಾಂ

ಪಂದ್ಯ ಆರಂಭ: ಬೆಳಗ್ಗೆ 9, 
ಸ್ಥಳ: ಚಿತ್ತಗಾಂಗ್‌