Ind vs Aus: ಟೀಂ ಇಂಡಿಯಾಕ್ಕೆ ಐತಿಹಾಸಿಕ ಕ್ಲೀನ್ ಸ್ವೀಪ್ ಗುರಿ..!
ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೂ ಗೈರಾಗಲಿದ್ದು, ಶುಭ್‌ಮನ್ ಗಿಲ್ ಸಹ ಹೊರಗುಳಿಯಲು ನಿರ್ಧರಿಸಿದ್ದಾರೆ.
ರಾಜ್‌ಕೋಟ್(ಸೆ.27): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ, ಅಕ್ಟೋಬರ್ 8ರ ವಿಶ್ವಕಪ್ ಪಂದ್ಯದ ರಿರ್ಹಸಲ್‌ನಂತೆ ಇರುವ ನಿರೀಕ್ಷೆ ಇದೆ. ಬುಧವಾರ ಇಲ್ಲಿ ನಡೆಯಲಿರುವ ಪಂದ್ಯ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
ಈ ವರೆಗೂ ಆಸ್ಟ್ರೇಲಿಯಾ ವಿರುದ್ಧ ಭಾರತ, ಭಾರತ ವಿರುದ್ಧ ಆಸ್ಟ್ರೇಲಿಯಾ ಏಕದಿನದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಲ್ಲ. ಪ್ರಚಂಡ ಲಯದಲ್ಲಿರುವ ಭಾರತಕ್ಕೆ ಆ ಅವಕಾಶವಿದ್ದು, ಅದರ ಸಂಪೂರ್ಣ ಬಳಕೆ ಮಾಡಿಕೊಳ್ಳಲು ಕಾಯುತ್ತಿದೆ. ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೂ ಗೈರಾಗಲಿದ್ದು, ಶುಭ್‌ಮನ್ ಗಿಲ್ ಸಹ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಜೊತೆ ಕಿಶನ್ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದ್ದು, 4ನೇ ಶ್ರೇಯಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ 6ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಆಡಬಹುದು. ಶಮಿ, ಪ್ರಸಿದ್ಧ್ ಕೃಷ್ಣ ಬದಲಿಗೆ ಬುಮ್ರಾ ಹಾಗೂ ಸಿರಾಜ್ ಆಡಲಿದ್ದಾರೆ.
'ಕ್ರಿಕೆಟ್ ದೇವತೆ' ಸ್ಮೃತಿ ಮಂಧನಾ ನೋಡಲು ಬೀಜಿಂಗ್‌ನಿಂದ ಹಾಂಗ್ಝೂಗೆ ಬಂದ ಚೀನಿ ಅಭಿಮಾನಿ..!
ಇನ್ನು ಆಸ್ಟ್ರೇಲಿಯಾಗೆ ಮ್ಯಾಕ್ಸ್‌ವೆಲ್, ಸ್ಟಾರ್ಕ್‌ರ ಸೇರ್ಪಡೆ ಬಲ ತುಂಬುವ ನಿರೀಕ್ಷೆ ಇದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕಮಿನ್ಸ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ತನ್ನ ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಕ್ರಮವಾಗಿ 338, 416, 315, 399 ರನ್ ಬಿಟ್ಟುಕೊಟ್ಟಿದ್ದು, ಸುಧಾರಿತ ಬೌಲಿಂಗ್ ಪ್ರದರ್ಶನ ತೋರಬೇಕಾದ ಒತ್ತಡದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತಿದ್ದ ಆಸೀಸ್, ವಿಶ್ವಕಪ್‌ಗೂ ಮುನ್ನ ಪಂದ್ಯವೊಂದನ್ನು ಗೆದ್ದು ಆತ್ಮವಿಶ್ವಾಸ ಮರಳಿ ಪಡೆಯಲು ಕಾಯುತ್ತಿದೆ.
ಸಂಭವನೀಯ ಆಟಗಾರರ ಪಟ್ಟಿ:
ಭಾರತ:
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್(ನಾಯಕ), ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಪಿಚ್ ರಿಪೋರ್ಟ್:
ರಾಜ್‌ಕೋಟ್ ಪಿಚ್ ಅನ್ನು ಸದಾ ಹೈವೇಗೆ ಹೋಲಿಸಲಾಗುತ್ತದೆ. ಹೀಗಾಗಿ ಮತ್ತೊಮ್ಮೆ ಬೃಹತ್ ಮೊತ್ತ ದಾಖಲಾಗಬಹುದು. ಇಲ್ಲಿ ಈವರೆಗೂ ನಡೆದಿರುವ 3 ಏಕದಿನ ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ 300+ ರನ್ ದಾಖಲಾಗಿದೆ.