ಡೆಲ್ಲಿ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಭಾರತ ಕ್ರಿಕೆಟ್ ತಂಡವಿರಾಟ್ ಕೊಹ್ಲಿಯ ಚೋಲೆ ಬಟುರೆ ಫುಡ್ ವಿಚಾರದ ಬಗ್ಗೆ ತುಟಿಬಿಚ್ಚಿದ ದ್ರಾವಿಡ್‌ಅದು ಚೋಲೆ ಬಟುರೆ ಅಗಿರಲಿಲ್ಲ ಎಂದ ಹೆಡ್ ಕೋಚ್ ರಾಹುಲ್ ದ್ರಾವಿಡ್
ನವದೆಹಲಿ(ಫೆ.20): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವು ಮೈದಾನದೊಳಗೆ ಹಾಗೂ ಮೈದಾನದಾಚೆಗೆ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತಕ್ಕೆ 115 ರನ್‌ಗಳ ಗುರಿ ಸಿಕ್ಕಿತು. ಈ ಸುಲಭ ಗೆಲುವು ಬೆನ್ನತ್ತಿದ ಟೀಂ ಇಂಡಿಯಾ, ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನಾಡಿದ ಚೇತೇಶ್ವರ್ ಪೂಜಾರ ಗೆಲುವಿನ ರನ್ ಬಾರಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು.
ಇನ್ನು ಡೆಲ್ಲಿ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಕ್ಷರ್ ಪಟೇಲ್ ಬಾರಿಸಿದ ಆಕರ್ಷಕ 74 ರನ್‌ಗಳ ನೆರವಿನಿಂದ ಟೀಂ ಇಂಡಿಯಾ 262 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸಮಯೋಚಿತ 44 ರನ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇನ್ನು ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದ ಬಳಿಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಜತೆ ಗಂಭೀರವಾಗಿ ಚರ್ಚೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು, ಆಹಾರದ ಪೊಟ್ಟಣವೊಂದನ್ನು ತಂದುಕೊಡಲು ಮುಂದಾಗ, ವಿರಾಟ್ ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದ್ದರು. ಜತೆಗೆ ದ್ರಾವಿಡ್ ಜತೆ ಕೊಹ್ಲಿ ಮಾತುಕತೆ ಮುಂದುವರೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ವಿರಾಟ್ ಕೊಹ್ಲಿಗೆ ಆ ಸಿಬ್ಬಂದಿ ತಂದುಕೊಟ್ಟಿದ್ದು, ಚೋಲೆ ಬಟುರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಕೊಹ್ಲಿಯನ್ನು ಕರೆದ ಸಿಬ್ಬಂದಿ ಚೋಲೆ ಬಟುರೆ ಎಂದಿದ್ದಾರೆ. ತಕ್ಷಣ ಕೊಹ್ಲಿ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಚಪ್ಪಾಳೆ ತಟ್ಟಿ ಒಳಗಿಡಿ ಎಂದು ಸೂಚನೆ ನೀಡಿದ್ದಾರೆ ಎಂದೇ ಭಾವಿಸಲಾಗಿತ್ತು. ಕೆಲವು ನೆಟ್ಟಿಗರು, ವಿರಾಟ್ ಕೊಹ್ಲಿ ಚೋಲೆ ಬಟುರೆ ರಾಯಭಾರಿ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಆ ಸಿಬ್ಬಂದಿ ತಂದುಕೊಟ್ಟಿದ್ದು ಚೋಲೆ ಬಟುರೆ ಆಗಿರಲಿಲ್ಲ ಎನ್ನುವ ಮಾಹಿತಿಯನ್ನು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೊರಹಾಕಿದ್ದಾರೆ.
ದಿಲ್ಲಿ ವಾಲಾನ ಚೋಲೆ ಬಟುರೆ ಪ್ರೀತಿ, ಕ್ಯಾಮೆರದಲ್ಲಿ ಸೆರೆಯಾಯ್ತು ಕೊಹ್ಲಿ ರಿಯಾಕ್ಷನ್!
ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ, ಕಾರ್ಯಕ್ರಮದ ನಿರೂಪಕಿ ಮಯಾಂತಿ ಲ್ಯಾಂಗರ್, ರಾಹುಲ್ ದ್ರಾವಿಡ್ ಬಳಿ, ಚೋಲೆ ಬಟುರೆ ಹೇಗಿತ್ತು ಎಂದು ಪ್ರಶ್ನಿಸಿದ್ದಾರೆ. ಆಗ ನಗುತ್ತಲೇ ಪ್ರತಿಕ್ರಿಯೆ ನೀಡಿದ ರಾಹುಲ್ ದ್ರಾವಿಡ್, ಅದು ಚೋಲೆ ಬಟುರೆ ಆಗಿರಲಿಲ್ಲ, ಬದಲಾಗಿ ಚೋಲೆ ಕುಲ್ಚಾ ಆಗಿತ್ತು. ನನಗೂ ಅದನ್ನು ತಿನ್ನುವಂತೆ ನನಗೂ ಆಸೆ ತೋರಿಸಿದರು. ನಾನಾಗ, ನನಗೀಗ 50 ವರ್ಷ, ನನ್ನಿಂದ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದೆ ಎಂದು ದ್ರಾವಿಡ್ ತಮಾಶೆಯಾಗಿಯೇ ಹೇಳಿದ್ದಾರೆ.
