* ಮೊದಲ ಏಕದಿನ ಪಂದ್ಯದಲ್ಲಿ 188 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್* ತಲಾ 3 ವಿಕೆಟ್‌ ಕಬಳಿಸಿ ಮಿಂಚಿದ ಸಿರಾಜ್, ಶಮಿ* ಸಮಯೋಚಿತ ಅರ್ಧಶತಕ ಚಚ್ಚಿದ ಮಿಚೆಲ್ ಮಾರ್ಶ್‌

ಮುಂಬೈ(ಮಾ.17): ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಶ್‌(81) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 188 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ ನೀಡಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ ಮೂರು ವಿಕೆಟ್ ಕಬಳಿಸಿದರು.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಲಿಳಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ವೇಗಿ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. ಎರಡನೇ ಓವರ್‌ನ ಕೊನೆಯಲ್ಲಿ ಟ್ರಾವಿಸ್ ಹೆಡ್(5) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಪೆವಿಲಿಯನ್ನಿಗಟ್ಟಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಮಿಚೆಲ್‌ ಮಾರ್ಶ್‌ ಹಾಗೂ ನಾಯಕ ಸ್ಟೀವ್‌ ಸ್ಮಿತ್ ಜೋಡಿ 72 ವಿಕೆಟ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು. ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ಬಲಿ ಪಡೆಯುವಲ್ಲಿ ಹಾರ್ದಿಕ್ ಪಾಂಡ್ಯ ಸಫಲರಾದರು.

ಮಿಚೆಲ್ ಮಾರ್ಶ್‌ ಆಕರ್ಷಕ ಅರ್ಧಶತಕ: ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಬಡ್ತಿ ಪಡೆದು ಮೈದಾನಕ್ಕಿಳಿದ ಮಿಚೆಲ್‌ ಮಾರ್ಶ್‌ ಸ್ಪೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮಿಚೆಲ್ ಮಾರ್ಶ್‌ 65 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 81 ರನ್‌ ಬಾರಿಸಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Scroll to load tweet…

ದಿಢೀರ್ ಕುಸಿದ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಒಂದು ಹಂತದಲ್ಲಿ 129 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಮಿಚೆಲ್ ಮಾರ್ಶ್‌ ವಿಕೆಟ್‌ ಪತನದ ಬಳಿಕ ಆಸ್ಟ್ರೇಲಿಯಾ ತಂಡವು ದಿಢೀರ್ ಕುಸಿತ ಕಂಡಿತು. ಆಸ್ಟ್ರೇಲಿಯಾ ತಂಡವು ತನ್ನ ಖಾತೆಗೆ 59 ರನ್‌ ಸೇರಿಸುವಷ್ಟರಲ್ಲಿ ಎಲ್ಲಾ 8 ವಿಕೆಟ್ ಕಳೆದುಕೊಳ್ಳುವ ಮೂಲಕ 190 ರನ್‌ಗಳೊಳಗೆ ಸರ್ವಪತನ ಕಂಡಿತು. ಮಾರ್ನಸ್ ಲಬುಶೇನ್(15), ಜೋಶ್ ಇಂಗ್ಲಿಶ್‌(26) ಹಾಗೂ ಕ್ಯಾಮರೋನ್ ಗ್ರೀನ್‌(12) ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್‌(8), ಮಾರ್ಕಸ್ ಸ್ಟೋನಿಸ್(5) ಹಾಗೂ ಶಾನ್ ಅಬೋಟ್ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು.

Ind vs Aus 1st ODI: ಆಸೀಸ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ: ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅನುಭವಿ ವೇಗಿ ಮೊಹಮ್ಮದ್ ಶಮಿ ಕೇವಲ 17 ರನ್‌ ನೀಡಿ 3 ವಿಕೆಟ್ ಪಡೆದರೆ, ಸಿರಾಜ್ 29 ರನ್ ನೀಡಿ 3 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು. ಇನ್ನು ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಕುಲ್ದೀಪ್‌ ಯಾದವ್ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್;

ಆಸ್ಟ್ರೇಲಿಯಾ: 188/10(35.4 ಓವರ್‌ಗಳಲ್ಲಿ)

ಮಿಚೆಲ್‌ ಮಾರ್ಶ್: 81
ಜೋಶ್ ಇಂಗ್ಲಿಶ್‌: 26

ಮೊಹಮ್ಮದ್ ಶಮಿ: 17/3

(* ಆಸ್ಟ್ರೇಲಿಯಾದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)