* ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ* ನಾಲ್ವರು ವೇಗಿಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ* ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕ

ಮುಂಬೈ(ಮಾ.17): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ. ಈ ವರ್ಷ ಈಗಾ​ಗಲೇ ಶ್ರೀಲಂಕಾ ಹಾಗೂ ನ್ಯೂಜಿ​ಲೆಂಡ್‌ ವಿರುದ್ಧ ಏಕ​ದಿನ ಸರಣಿ ಗೆದ್ದಿ​ರುವ ಭಾರತ ಮತ್ತೊಂದು ಸರಣಿ ಮೇಲೆ ಕಣ್ಣಿ​ಟ್ಟಿದ್ದು, ಆಸೀಸ್‌ ಕಳೆದ ನವೆಂಬರ್‌ ಬಳಿಕ ಮೊದಲ ಬಾರಿ ಏಕದಿನ ಸರಣಿಯೊಂದನ್ನು ಆಡುತ್ತಿದೆ.

ಭಾರತ ತಂಡವು ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ಹೀಗೆ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ. ಇದರ ಜತೆಗೆ ಸ್ಪಿನ್ನರ್‌ಗಳ ರೂಪದಲ್ಲಿ ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಕಣಕ್ಕಿಳಿದಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಹಾಗೂ ಶುಭ್‌ಮನ್‌ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ಕೆ ಎಲ್ ರಾಹುಲ್ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. 

Scroll to load tweet…

ವಾರ್ನರ್‌ಗಿಲ್ಲ ಸ್ಥಾನ: ಆಸ್ಟ್ರೇಲಿಯಾ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿದ್ದು ಪ್ಯಾಟ್ ಕಮಿನ್ಸ್ ಬದಲಿಗೆ ಸ್ಟೀವ್ ಸ್ಮಿತ್, ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅಲೆಕ್ಸ್‌ ಕ್ಯಾರಿ ಬದಲಿಗೆ ಜೋಶ್ ಇಂಗ್ಲಿಶ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಸಂಪೂರ್ಣ ಫಿಟ್ ಆಗಿರದ ಹಿನ್ನೆಲೆಯಲ್ಲಿ ವಾರ್ನರ್ ಬದಲಿಗೆ ಮಿಚೆಲ್ ಮಾರ್ಷ್‌ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ನಂ.1 ಸ್ಥಾನಕ್ಕೆ ಫೈಟ್‌

ಏಕ​ದಿನ ಶ್ರೇಯಾಂಕದಲ್ಲಿ ಭಾರತ 114 ರೇಟಿಂಗ್‌ ಅಂಕಗಳೊಂದಿಗೆ ಅಗ್ರ​ಸ್ಥಾ​ನ​ದ​ಲ್ಲಿದ್ದು, ಆಸೀ​ಸ್‌​(112 ಅಂಕ) 2ನೇ ಸ್ಥಾನ ಪಡೆದಿದೆ. ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಸರಣಿ ಗೆಲ್ಲಲೇಬೇಕು. ಆಸ್ಪ್ರೇಲಿಯಾ ಸರಣಿ ಜಯಿಸಿದರೆ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲಿದೆ. ಭಾರತ 0-3ರಲ್ಲಿ ಸೋತರೆ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿಯಲಿದೆ.

10 ವರ್ಷ​ದಲ್ಲಿ ಕೇವಲ 2 ಸರಣಿ ಸೋಲು!

ಭಾರತ ತವ​ರಿ​ನಲ್ಲಿ ಕಳೆದ 10 ವರ್ಷ​ದಲ್ಲಿ ಆಡಿ​ರುವ 20 ಏಕ​ದಿನ ಸರ​ಣಿ​ಗ​ಳಲ್ಲಿ 18ರಲ್ಲಿ ಗೆಲುವು ಸಾಧಿ​ಸಿದೆ. ಈ ಪೈಕಿ 2015-16ರಲ್ಲಿ ದ.ಆ​ಫ್ರಿಕಾ ವಿರುದ್ಧ, 2019ರಲ್ಲಿ ಆಸೀಸ್‌ ವಿರುದ್ಧ ಸರಣಿ ಸೋಲ​ನು​ಭ​ವಿ​ಸಿದೆ. 2019ರ ಆಸೀಸ್‌ ಸರಣಿ ಬಳಿಕ ತವ​ರಿ​ನಲ್ಲಿ ಆಡಿದ ಎಲ್ಲಾ 7 ಸರ​ಣಿ​ಗ​ಳ​ಲ್ಲಿಯೂ ಭಾರತ ಗೆಲುವು ಸಾಧಿ​ಸಿದೆ.

ತಂಡಗಳು ಹೀಗಿವೆ ನೋಡಿ:

ಭಾರತ: ಇಶಾನ್‌ಕಿಶನ್, ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಕೆ ಎಲ್ ರಾಹುಲ್‌, ಹಾರ್ದಿ​ಕ್‌ ಪಾಂಡ್ಯ​(​ನಾ​ಯ​ಕ), ರವೀಂದ್ರ ಜಡೇಜಾ, ಶಾರ್ದೂಲ್‌ ಶಾರ್ದೂಲ್, ಮೊಹಮ್ಮದ್ ಸಿರಾಜ್‌, ಮೊಹಮ್ಮದ್ ಶಮಿ/ಉಮ್ರಾನ್‌ ಮಲಿಕ್.

ಆಸ್ಪ್ರೇ​ಲಿ​ಯಾ: ಆಸ್ಪ್ರೇ​ಲಿ​ಯಾ: ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್‌, ಸ್ಟೀವ್‌ ಸ್ಮಿತ್‌​(​ನಾ​ಯ​ಕ), ಮಾರ್ನಸ್ ಲಬು​ಶೇನ್‌, ಗ್ಲೆನ್ ಮ್ಯಾಕ್ಸ್‌​ವೆಲ್‌, ಕ್ಯಾಮರೋನ್ ಗ್ರೀನ್‌, ಮಾರ್ಕಸ್ ಸ್ಟೋನಿಸ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಶಾನ್ ಅಬ್ಬೋಟ್

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್