* ಭಾರತ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ* 3 ಪಂದ್ಯಗಳ ಏಕದಿನ ಸರಣಿ ಮಾರ್ಚ್‌ 17ರಿಂದ ಆರಂಭ* ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಶ್

ಮೆಲ್ಬರ್ನ್‌(ಫೆ.23): ಮುಂಬರುವ ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಪ್ರಕಟವಾಗಿದ್ದು, ಆರ್‌ಸಿಬಿ ಸ್ಟಾರ್ ಆಲ್ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್‌ ಹಾಗೂ ಮಿಚೆಲ್‌ ಮಾರ್ಶ್‌ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸಾಕಷ್ಟು ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಈ ಇಬ್ಬರು ಸ್ಟಾರ್ ಆಲ್ರೌಂಡರ್‌ಗಳು ಕಾಂಗರೂ ಪಡೆ ಕೂಡಿಕೊಂಡಿದ್ದು, ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಮಿಚೆಲ್‌ ಮಾರ್ಶ್‌ ಮುಂಗಾಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವಲ್ಲಿ ವೇಗಿ ಜೇ ರಿಚರ್ಡ್‌ಸನ್ ಕೂಡಾ ಯಶಸ್ವಿಯಾಗಿದ್ದಾರೆ. ಇನ್ನು ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯನ್ನು ಮಧ್ಯದಲ್ಲೇ ತೊರೆದು ತವರಿಗೆ ವಾಪಸ್ಸಾಗಿರುವ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವೇಗಿ ಜೋಶ್ ಹೇಜಲ್‌ವುಡ್‌, ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಮಾರ್ಶ್‌ ಗಾಯದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಇನ್ನು ಬಿಗ್‌ಬ್ಯಾಶ್‌ ಲೀಗ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಜೇ ರಿಚರ್ಡ್‌ಸನ್‌ ಇದೀಗ ರಾಷ್ಟ್ರೀಯ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಈ ಮೂವರು ಆಟಗಾರರು ತಂಡ ಸೇರ್ಪಡೆ ಕುರಿತಂತೆ ಮಾತನಾಡಿರುವ, ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ, ಇದೇ ವರ್ಷದ ಕಡೆಯಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಮ್ಯಾಕ್ಸ್‌ವೆಲ್‌, ಮಾರ್ಶ್‌ ಹಾಗೂ ರಿಚರ್ಡ್‌ಸನ್‌ ನಮ್ಮ ತಂಡದ ಪರ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲೇ ನಡೆಯಲಿದೆ.

"ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 7 ತಿಂಗಳು ಬಾಕಿ ಇದೆ. ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತದಲ್ಲೇ ನಡೆಯಲಿರುವ ಏಕದಿನ ಸರಣಿಯ ಈ ಮೂರು ಪಂದ್ಯಗಳು ಸಿದ್ದತೆಯ ದೃಷ್ಟಿಯಿಂದ ನಮಗೆ ಸಾಕಷ್ಟು ಮಹತ್ವದ್ದಾಗಿವೆ. ಅಕ್ಟೋಬರ್ ತಿಂಗಳಿಗೆ ನಾವಿಲ್ಲಿಗೆ ಬರುವಾಗ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಶ್‌ ಹಾಗೂ ಜೇ ರಿಚರ್ಡ್‌ಸನ್ ಅವರು ನಮ್ಮ ತಂಡದ ಪ್ರಮುಖ ಆಟಗಾರರಾಗಿರಲಿದ್ದಾರೆ ಎನ್ನುವ ವಿಶ್ವಾಸವಿದೆ" ಎಂದು ಜಾರ್ಜ್‌ ಬೇಲಿ ಹೇಳಿದ್ದಾರೆ.

'ವಿರಾಟ್ ಕೊಹ್ಲಿ' ಜತೆ ಲಿಪ್‌ಲಾಕ್‌ ಮಾಡಿದ ಸುಂದರ ಯುವತಿ; ಕೇಸ್‌ ದಾಖಲಿಸಲು ಅನುಷ್ಕಾ ಶರ್ಮಾಗೆ ನೆಟ್ಟಿಗರ ಸಲಹೆ..!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿ ಮುಕ್ತಾಯದ ಬಳಿಕ ಉಭಯ ತಂಡಗಳು ಮಾರ್ಚ್ 17ರಿಂದ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೊದಲ ಏಕದಿನ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದರೆ, ಮಾರ್ಚ್‌ 19ರಂದು ನಡೆಯಲಿರುವ ಎರಡನೇ ಪಂದ್ಯಕ್ಕೆ ವಿಶಾಖಪಟ್ಟಣಂ ಸಾಕ್ಷಿಯಾಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಪಂದ್ಯವು ಮಾರ್ಚ್‌ 22ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ. 

ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್(ನಾಯಕ), ಡೇವಿಡ್ ವಾರ್ನರ್‌, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಶಾನ್ ಅಬ್ಬೋಟ್, ಆಸ್ಟನ್ ಏಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಶ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಶ್‌, ಗ್ಲೆನ್‌ ಮ್ಯಾಕ್ಸ್‌ವೆಲ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್‌, ಮಾರ್ಕಸ್‌ ಸ್ಟೋನಿಸ್, ಆಡಂ ಜಂಪಾ.