ಹೈದರಾಬಾದ್[ಮಾ.02]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್ರೌಂಡರ್ ಕೇದಾರ್ ಜಾಧವ್ 141 ರನ್’ಗಳ ಶತಕದ ಜತೆಯಾಟದ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 99 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 5ವಿಕೆಟ್’ಗೆ ಜತೆಯಾದ ಧೋನಿ-ಜಾಧವ್ ಜೋಡಿ ಮುರಿಯದ 141 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಧೋನಿ ಬೌಂಡರಿ ಸಿಡಿಸುವ ಮೂಲಕ ಮ್ಯಾಚ್ ಫಿನಿಶ್ ಮಾಡಿದರು.

ಆರಂಭದಲ್ಲೇ ಧವನ್[0] ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ಕೊಹ್ಲಿ[44] ಹಾಗೂ ಉಪನಾಯಕ ಎರಡನೇ ವಿಕೆಟ್’ಗೆ 76 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಉತ್ತಮವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದ ಕೊಹ್ಲಿ ಅರ್ಧಶತಕದ ಹೊಸ್ತಿಲಲ್ಲಿ ಜಂಪಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಇದಾದ ಕೆಲಹೊತ್ತಿನಲ್ಲೇ ರೋಹಿತ್ ಕೂಡಾ ಫಿಂಚ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಅಂಬಟಿ ರಾಯುಡು ಬ್ಯಾಟಿಂಗ್ ಕೇವಲ 13 ರನ್’ಗಳಿಗೆ ಸೀಮಿತವಾಯಿತು. ಈ ವೇಳೆ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 99 ರನ್. 

ದಡ ಸೇರಿಸಿದ ಧೋನಿ-ಜಾಧವ್: ಈ ವೇಳೆ 5ನೇ ವಿಕೆಟ್’ಗೆ ಜತೆಯಾದ ಜಾಧವ್-ಧೋನಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಆರಂಭದಲ್ಲಿ ಮಂದಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಂಡರು. ಕೇದಾರ್ ಜಾಧವ್ 5ನೇ ಅರ್ಧಶತಕ ಸಿಡಿಸಿದರೆ, ಧೋನಿ 71ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಕೇದಾರ್ ಜಾಧವ್ 87 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 81 ರನ್ ಬಾರಿಸಿದರೆ, ಧೋನಿ 72 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಬಾರಿಸಿದರು. ಈ ಅರ್ಧಶತಕದೊಂದಿಗೆ ಧೋನಿ ಆಸ್ಟ್ರೇಲಿಯಾ ವಿರುದ್ಧ 2019ರಲ್ಲಿ 4 ಅರ್ಧಶತಕ ಸಿಡಿಸಿ ಮಿಂಚಿದರು.

ಇದಕ್ಕೂ ಮೊದಲು ಉಸ್ಮಾನ್ ಖ್ವಾಜಾ[50] ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ 40 ರನ್’ಗಳ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು.