ನವದೆಹಲಿ(ನ.17): ಕೊರೋನಾದಿಂದಾಗಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಒಳಪಟ್ಟ ಹಲವು ಸರಣಿಗಳು ರದ್ದುಗೊಂಡ ಕಾರಣ, 2021ರ ಜೂನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ತಂಡಗಳ ಆಯ್ಕೆಗೆ ಐಸಿಸಿ ಹೊಸ ನಿಯಮ ಅಳವಡಿಕೆ ಮಾಡುವ ಸಾಧ್ಯತೆ ಇದೆ. ತಂಡಗಳು ಒಟ್ಟು ಗಳಿಸುವ ಅಂಕಗಳ ಪ್ರತಿಶತದ ಆಧಾರದಲ್ಲಿ ಫೈನಲ್‌ನಲ್ಲಾಡುವ ತಂಡಗಳನ್ನು ನಿರ್ಧರಿಸುವ ಬಗ್ಗೆ ಐಸಿಸಿ ಕ್ರಿಕೆಟ್‌ ಸಮಿತಿ ಪ್ರಸ್ತಾಪವಿರಿಸಿದೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 9 ತಂಡಗಳು ಸ್ಪರ್ಧಿಸುತ್ತಿದ್ದು, ಅತಿಹೆಚ್ಚು ಅಂಕ ಗಳಿಸುವ ಅಗ್ರ 2 ತಂಡಗಳಿಗೆ ಫೈನಲ್‌ ಪ್ರವೇಶ ನೀಡುವುದಾಗಿ ಐಸಿಸಿ ಘೋಷಿಸಿತ್ತು. ಸದ್ಯ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ, ಪ್ರತಿ ತಂಡವೂ ಒಟ್ಟು 6 ಸರಣಿಗಳನ್ನು ಆಡಲಿದ್ದು, ಪ್ರತಿ ಸರಣಿಯಲ್ಲಿ ಗರಿಷ್ಠ 120 ಅಂಕಗಳನ್ನು ಗಳಿಸಲು ಅವಕಾಶವಿತ್ತು. ಆದರೆ ಈಗ ನಿಯಮದಲ್ಲಿ ಸ್ವಲ್ಪ ಬದಲಾವಣೆ ತರಲು ಮುಂದಾಗಿದೆ.

ಹೊಸ ಪ್ರಸ್ತಾಪದ ಪ್ರಕಾರ, ಆಸ್ಪ್ರೇಲಿಯಾ ವಿರುದ್ಧ ಭಾರತ 4 ಪಂದ್ಯಗಳಲ್ಲೂ ಸೋತು, ಇಂಗ್ಲೆಂಡ್‌ ವಿರುದ್ಧ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಸರಣಿಯಲ್ಲಿ 5 ಪಂದ್ಯಗಳಲ್ಲೂ ಗೆದ್ದರೆ ಒಟ್ಟು 480 ಅಂಕ ತಲುಪಲಿದೆ. ಅಂದರೆ ತಂಡದ ಒಟ್ಟು ಪ್ರತಿಶತ 66.67ರಷ್ಟಾಗಲಿದೆ. ಇಂಗ್ಲೆಂಡ್‌ ವಿರುದ್ಧ 5-0ಯಲ್ಲಿ ಗೆದ್ದು, ಆಸ್ಪ್ರೇಲಿಯಾ ವಿರುದ್ಧ 3-1ರಲ್ಲಿ ಸೋತರೆ 510 ಅಂಕ (ಶೇ.70.83) ತಲುಪಲಿದೆ. ಇಂಗ್ಲೆಂಡ್‌ ವಿರುದ್ಧ 5-0ಯಲ್ಲಿ ಗೆದ್ದು, ಆಸ್ಪ್ರೇಲಿಯಾ ವಿರುದ್ಧ 2-0ಯಲ್ಲಿ ಸೋತರೆ, 500 ಅಂಕ (ಶೇ.69.44) ತಲುಪಲಿದೆ. 

ಆಸೀಸ್‌ನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ..!

ಹೀಗಾಗಿ, ಆಸ್ಪ್ರೇಲಿಯಾ ವಿರುದ್ಧ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಭಾರತಕ್ಕೆ ಫೈನಲ್‌ ಸ್ಥಾನ ಸುಲಭವಾಗಿ ಸಿಗುವುದಿಲ್ಲ. ನ್ಯೂಜಿಲೆಂಡ್‌ ತವರಿನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಪಾಕಿಸ್ತಾನ ವಿರುದ್ಧ ಸರಣಿಗಳನ್ನು ಆಡಲಿದ್ದು, ಗರಿಷ್ಠ 240 ಅಂಕ ಗಳಿಸಲು ಅವಕಾಶವಿದೆ. ಹೀಗಾದಲ್ಲಿ ಶೇ.70 ಅಂಕ ಗಳಿಸಲಿದ್ದು ಫೈನಲ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಿರಲಿದೆ.

ಸದ್ಯ ಭಾರತ 4 ಸರಣಿಗಳಲ್ಲಿ 480 ಅಂಕಗಳಿಗೆ ಸ್ಪರ್ಧಿಸಿ 360 ಅಂಕ ಗಳಿಸಿದೆ. ಅಂದರೆ ತಂಡದ ಅಂಕಗಳ ಪ್ರತಿಶತ 75ರಷ್ಟಿದೆ. ಆಸ್ಪ್ರೇಲಿಯಾ ಶೇ.82.22ರಷ್ಟುಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಶೇ.60.83 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ ಶೇ.50ರಷ್ಟು ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.