ಆಸೀಸ್‌ನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ..!
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಕ್ವಾರಂಟೈನಲ್ಲಿದ್ದು, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅಭ್ಯಾಸ ಆರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.17): ಇಲ್ಲಿನ ಒಲಿಂಪಿಕ್ ಪಾರ್ಕ್ ಪುಲ್ಮನ್ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿರುವ ಟೀಂ ಇಂಡಿಯಾ ಆಟಗಾರರು ಭಾನುವಾರ ಅಭ್ಯಾಸದಲ್ಲಿ ನಿರತರಾಗಿದ್ದರು. ಮೊದಲ ದಿನವಾದ ಶನಿವಾರ ಜಿಮ್ ಹಾಗೂ ದೈಹಿಕ ಕಸರತ್ತು ನಡೆಸಿದ್ದ ಕೊಹ್ಲಿ ಬಳಗ, 2ನೇ ದಿನ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿತು.
ಕುಟುಂಬದೊಟ್ಟಿಗೆ ಕ್ವಾರಂಟೈನ್‌ನಲ್ಲಿಯೇ ದೀಪಾವಳಿ ಹಬ್ಬ ಆಚರಿಸಿರುವ ಆರ್. ಅಶ್ವಿನ್ ಹಾಗೂ ಅಜಿಂಕ್ಯ ರಹಾನೆ ಅಂಗಳಕ್ಕಿಳಿದು ಅಭ್ಯಾಸ ನಡೆಸಿದರು. ರಹಾನೆ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ನಾಯಕ ಕೊಹ್ಲಿ, ವೇಗಿ ಮೊಹಮದ್ ಶಮಿ ಕ್ಯಾಚ್ ಅಭ್ಯಾಸದಲ್ಲಿ ನಿರತರಾಗಿದ್ದರು. ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿರುವ ತಮಿಳುನಾಡು ವೇಗಿ ಟಿ. ನಟರಾಜನ್, ಸ್ಪಿನ್ನರ್ ಅಶ್ವಿನ್ ಸೇರಿದಂತೆ ಇತರರು ಬೌಲಿಂಗ್ ಅಭ್ಯಾಸ ನಡೆಸಿದರು.
ಭಾರತ ಉಳಿದಿರುವ ಹೋಟೆಲ್‌ನಿಂದ 30 ಕಿ.ಮೀ. ದೂರದಲ್ಲಿ ವಿಮಾನ ಪತನ
ಭಾರತ ಕ್ರಿಕೆಟ್ ತಂಡದ ಕ್ವಾರಂಟೈನ್ ಆಗಿರುವ ಪುಲ್ಮನ್ ಹೋಟೆಲ್‌ನಿಂದ 30 ಕಿ.ಮೀ. ದೂರದಲ್ಲಿ ಲಘು ವಿಮಾನವೊಂದು ಪತನವಾಗಿದೆ. ವಿಮಾನದಲ್ಲಿ ಸ್ಥಳೀಯ ಕ್ಲಬ್ ಕ್ರಿಕೆಟ್ ಆಟಗಾರರು ಹಾಗೂ ಫುಟ್ಬಾಲ್ ಆಟಗಾರರು ಪ್ರಯಾಣಿಸುತ್ತಿದ್ದರು.
ರೋಹಿತ್ ಶರ್ಮಾ ಬದಲು ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್ ನೀಡಲು ಒತ್ತಾಯ
ಸುಮಾರು 12 ಮಂದಿ ಪ್ರಯಾಣಿಕರಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇಂಜಿನ್ ದೋಷದಿಂದ ವಿಮಾನ ಪತನವಾಗಿದೆ ಎಂದು ಹೇಳಲಾಗುತ್ತಿದ್ದು, ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕೆಲವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.