ಏಕದಿನ ವಿಶ್ವಕಪ್ ಟೂರ್ನಿಯ ಪ್ರಮುಖ ಸದಸ್ಯ ಶುಭಮನ್ ಗಿಲ್ ಡೆಂಗ್ಯೂವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಗಿಲ್ ಜೊತೆ ಮಾತನಾಡಿದ ಯುವರಾಜ್ ಸಿಂಗ್ ಮಹತ್ವದ ಸಂದೇಶ ರವಾನಿಸಿದ್ದಾರೆ. 2011ರ ಹೋರಾಟದ ಹಾದಿಯನ್ನು ಹೇಳಿರುವ ಯುವರಾಜ್ ಸಿಂಗ್, ಗಿಲ್‌ಗೆ ಸ್ಪೂರ್ತಿ ತುಂಬಿದ್ದಾರೆ. ಯುವರಾಜ್ ಸಿಂಗ್ ನೀಡಿದ ಆ ಸಲಹೆ ಏನು? 

ನವದೆಹಲಿ(ಅ.12) ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ 2 ಗೆಲುವಿನ ಮೂಲಕ ಟೂರ್ನಿಯಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದೆ. ಇದೀಗ ಪಾಕಿಸ್ತಾನ ವಿರುದ್ದದ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಟೀಂ ಇಂಡಿಯಾದ ಪ್ರಮುಖ ಸದಸ್ಯ ಶುಭಮನ್ ಗಿಲ್ ಡೆಂಗ್ಯೂವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಗಿಲ್ ಅನುಪಸ್ಥಿತಿಯಲ್ಲೇ ಎರಡು ಪಂದ್ಯ ಆಡಿರುವ ಭಾರತ ಇದೀಗ 3ನೇ ಪಂದ್ಯಕ್ಕೆ ಗಿಲ್ ಆಗಮನಕ್ಕೆ ಕಾಯುತ್ತಿದೆ. ಇದರ ನಡುವೆ ಶುಭಮನ್ ಗಿಲ್ ಜೊತೆ ಮಾತನಾಡಿರುವ ಯುವರಾಜ್ ಸಿಂಗ್, ಮಹತ್ವದ ಸಲಹೆ ನೀಡಿದ್ದಾರೆ.

ಆಸ್ಪತ್ರೆಯಲ್ಲಿರುವ ಗಿಲ್‌ನ್ನು ಮಾನಸಿಕವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ತಯಾರು ಮಾಡಿದ್ದೇನೆ. ನಾನು 2011ರ ವಿಶ್ವಕಪ್ ಟೂರ್ನಿಯ ಹೋರಾಟದ ಹಾದಿ ಕುರಿತು ಗಿಲ್‌ಗೆ ಹೇಳಿದ್ದೇನೆ. 2011ರಲ್ಲಿ ನನಗೆ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಂಡಿತ್ತು. ವಿಶ್ವಕಪ್ ಟೂರ್ನಿಯಲ್ಲಿ ನನಗೆ ಮಹತ್ವದ ಜವಾಬ್ದಾರಿ ಇತ್ತು. ಹೀಗಾಗಿ ಕ್ಯಾನ್ಸರ್ ಜೊತೆಗೆ ಟೀಂ ಇಂಡಿಯಾ ಪರ ಹೋರಾಡಲು ನಿರ್ಧರಿಸಿ ತಕ್ಷಣವೇ ತಂಡ ಸೇರಿಕೊಂಡಿದ್ದೆ. ಚೇತರಿಸಿಕೊಳ್ಳುತ್ತಿರುವ ಗಿಲ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

World Cup 2023: 'ಪಾಕ್ ಎದುರಿನ ಪಂದ್ಯಕ್ಕಿಂತ ನನ್ನಮ್ಮ ನನಗೆ ಮುಖ್ಯ': ಜಸ್ಪ್ರೀತ್ ಬುಮ್ರಾ ಹೀಗಂದಿದ್ದೇಕೆ?

ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯಕ್ಕಾಗಿ ಚೆನ್ನೈಗೆ ಆಗಮಿಸಿದ ಟೀಂ ಇಂಡಿಯಾ ಪೈಕಿ ಗಿಲ್ ಜ್ವರದಿಂದ ಬಳಲಿದ್ದರು. ಆಸ್ಪತ್ರೆ ದಾಖಲಾದ ಗಿಲ್‌ಗೆ ಡೆಂಗ್ಯೂ ಬಾಧಿಸಿರುವುದ ದೃಢಪಟ್ಟಿತ್ತು. ಹೀಗಾಗಿ ಗಿಲ್ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ವಿರುದ್ಧ ಪಂದ್ಯಕ್ಕೂ ಅಲಭ್ಯರಾಗಿದ್ದರು. ಡೆಂಗ್ಯೂವಿನಿಂದ ಶುಭಮನ್ ಗಿಲ್ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಪ್ರಕಾರ ಡೆಂಗ್ಯೂ ಕಾಣಿಸಿಕೊಂಡರೆ, ಕನಿಷ್ಠ 10 ರಿಂದ 15 ದಿನದ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಶುಭಮನ್ ಗಿಲ್ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಕಡಿಮೆ. ಯುವರಾಜ್ ಸಿಂಗ್ ಸ್ಪೂರ್ತಿ ಮಾತನಿಂದ ಮಾನಸಿಕವಾಗಿ ಸಿದ್ಧವಾಗಿರುವ ಗಿಲ್, ದೈಹಿಕವಾಗಿ ಫಿಟ್ ಆಗಬೇಕಾದ ಅನಿವಾರ್ಯತೆ ಇದೆ. 

ಶುಭಮನ್ ಗಿಲ್ ಉತ್ತಮ ಬ್ಯಾಟ್ಸ್‌ಮನ್. 24ರ ಹರೆಯದ ಗಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿ ಮಿಂಚಿದ್ದರು. ಭಾರತ ಏಷ್ಯಾಕಪ್ ಟೂರ್ನಿ ಗದ್ದು ಸಂಭ್ರಮಿಸಿದೆ. ಏಕದಿನದಲ್ಲಿ ಗಿಲ್ ಈ ವರ್ಷ 1230 ರನ್ ಸಿಡಿಸಿದ್ದಾರೆ. ಏಕದಿನ ಮಾದರಿಯಲ್ಲಿ ಶುಭಮನ್ ಗಿಲ್ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದಾರೆ.

ವಿಶ್ವಕಪ್‌ನಲ್ಲಿ ಗರಿಷ್ಠ ರನ್‌: ಸಚಿನ್ ದಾಖಲೆ ನುಚ್ಚುನೂರು ಮಾಡಿದ ಕಿಂಗ್ ಕೊಹ್ಲಿ..!