ಆಡಿರುವ 5 ಪಂದ್ಯಗಳಲ್ಲೂ ಗೆದ್ದಿರುವ ಟೀಂ ಇಂಡಿಯಾ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ. ಐಸಿಸಿ ಟೂರ್ನಿಗಳಲ್ಲಿ ತನ್ನ ಬದ್ಧವೈರಿ ನ್ಯೂಜಿಲೆಂಡ್‌ಗೂ ಮಣ್ಣು ಮುಕ್ಕಿಸಿರುವ ಭಾರತ, ಹಾಲಿ ಚಾಂಪಿಯನ್‌ಗೂ ಸೋಲುಣಿಸಲು ತವಕಿಸುತ್ತಿದೆ.

ಲಖನೌ(ಅ.29): ಭಾರತ ವರ್ಸಸ್‌ ಇಂಗ್ಲೆಂಡ್‌, ಇದು 2023ರ ಏಕದಿನ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯ ಎನಿಸಿತ್ತು. ಎಷ್ಟೇ ಆದರೂ, ಎರಡೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಟೂರ್ನಿಗೆ ಕಾಲಿಟ್ಟವು ತಾನೆ. ಒಂದು ಆತಿಥೇಯ ತಂಡವಾದರೆ ಮತ್ತೊಂದು ಹಾಲಿ ವಿಶ್ವ ಚಾಂಪಿಯನ್‌. ಆದರೆ ಇಂಗ್ಲೆಂಡ್‌ ಈ ರೀತಿ ಕಳಪೆಯಾಟವಾಡಿ ದುರ್ಬಲ ತಂಡವೆನಿಸಿಕೊಳ್ಳಲಿದೆ ಎಂದು ಯಾರೂ ಊಹಿಸಿರಲಿಲ್ಲ. 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ಇಂಗ್ಲೆಂಡ್‌, ಅಂಕಪಟ್ಟಿಯ ಕೆಳಭಾಗದಲ್ಲೇ ಉಳಿದಿದೆ. ತಂಡ ನಾಕೌಟ್‌ ಹಂತಕ್ಕೆ ಪ್ರವೇಶಿಸಬೇಕಿದ್ದರೆ ಇಲ್ಲಿಂದ ಮುಂದಕ್ಕೆ ಪವಾಡವೇ ಘಟಿಸಬೇಕು.

ಮತ್ತೊಂದೆಡೆ ಭಾರತ ಫೇವರಿಟ್‌ ಪಟ್ಟ ಉಳಿಸಿಕೊಂಡು ಮುನ್ನುಗ್ಗುತ್ತಿದೆ. ಆಡಿರುವ 5 ಪಂದ್ಯಗಳಲ್ಲೂ ಗೆದ್ದಿರುವ ಟೀಂ ಇಂಡಿಯಾ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ. ಐಸಿಸಿ ಟೂರ್ನಿಗಳಲ್ಲಿ ತನ್ನ ಬದ್ಧವೈರಿ ನ್ಯೂಜಿಲೆಂಡ್‌ಗೂ ಮಣ್ಣು ಮುಕ್ಕಿಸಿರುವ ಭಾರತ, ಹಾಲಿ ಚಾಂಪಿಯನ್‌ಗೂ ಸೋಲುಣಿಸಲು ತವಕಿಸುತ್ತಿದೆ.

ICC World Cup 2023: ಕಿವೀಸ್‌ ರೋಚಕ ಕದನ ಗೆದ್ದ ಆಸೀಸ್‌!

ರೋಹಿತ್‌, ಬುಮ್ರಾ ಟ್ರಂಪ್‌ಕಾರ್ಡ್ಸ್‌: ಭಾರತದ ಯಶಸ್ಸು ತಂಡ ಎರಡೂ ಇನ್ನಿಂಗ್ಸ್‌ಗಳನ್ನು ಹೇಗೆ ಆರಂಭಿಸಲಿದೆ ಎನ್ನುವುದರ ಮೇಲೆ ನಿಂತಿದೆ. ಈ ವರೆಗಿನ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಪವರ್‌-ಪ್ಲೇನಲ್ಲಿ 134.01ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರೆ, ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಅವರ ಮಾರಕ ದಾಳಿಯು ಎದುರಾಳಿಗಳನ್ನು ನಡುಗಿಸಿದೆ. ಮೊದಲ 10 ಓವರಲ್ಲಿ ಬುಮ್ರಾ ಕೇವಲ 2.90ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಬಹುತೇಕ ಪಂದ್ಯಗಳಲ್ಲಿ ಎದುರಾಳಿಗಳಿಗೆ ಆರಂಭಿಕ ಆಘಾತ ನೀಡಿ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಈ ಪಂದ್ಯ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರಲಿದ್ದು, ಸೆಮೀಸ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. ಈ ಪಂದ್ಯಕ್ಕೂ ಹಾರ್ದಿಕ್‌ ಪಾಂಡ್ಯ ಅಲಭ್ಯರಾಗಲಿರುವ ಕಾರಣ, ಐವರು ತಜ್ಞ ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯಲಿದೆ. ಇದೇ ಕಾರಣಕ್ಕೆ ನೆಟ್ಸ್‌ನಲ್ಲಿ ರೋಹಿತ್‌, ಕೊಹ್ಲಿ, ಗಿಲ್‌, ಸೂರ್ಯ ಬೌಲಿಂಗ್‌ ಅಭ್ಯಾಸ ನಡೆಸಿದ್ದು, ಅಗತ್ಯಬಿದ್ದರೆ ಒಂದೆರಡು ಓವರ್‌ ಮಾಡಬಹುದು. ಇನ್ನು ಈ ಪಂದ್ಯಕ್ಕೆ ಆಯ್ಕೆ ಮಾಡಿರುವ ಪಿಚ್‌ ಮೇಲೆ ತಕ್ಕಮಟ್ಟಿಗಿನ ಹುಲ್ಲಿರುವ ಕಾರಣ, ವೇಗಿಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ. ಹೀಗಾಗಿ ಆರ್‌.ಅಶ್ವಿನ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಕರ್ಮ ರಿಟರ್ನ್ಸ್‌..! ಗಂಗೂಲಿ ಬದುಕಿನಲ್ಲಿ ಆಟವಾಡಿದ್ದ ಕೋಚ್ ಗ್ರೆಗ್ ಚಾಪೆಲ್ ಪಾಡು ಕೇಳೋರೆ ಗತಿಯಿಲ್ಲ..!

ಸಿರಾಜ್‌ ಲಯದ್ದೇ ಚಿಂತೆ: ಭಾರತ ಸತತವಾಗಿ ಗೆಲ್ಲುತ್ತಿರುವ ಕಾರಣ ತಂಡದಲ್ಲಿರುವ ಕೆಲ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿಲ್ಲ. ಪ್ರಮುಖವಾಗಿ ಮೊಹಮದ್‌ ಸಿರಾಜ್‌ ಟೂರ್ನಿಯಲ್ಲಿ 5 ಪಂದ್ಯಗಳಿಂದ ಕೇವಲ 6 ವಿಕೆಟ್‌ ಪಡೆದಿದ್ದು, 5.90 ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ. ವಿಶ್ವಕಪ್‌ಗೆ ಕಾಲಿಡುವ ಮುನ್ನ 2023ರಲ್ಲಿ ಸಿರಾಜ್‌ 14 ಪಂದ್ಯಗಳಲ್ಲಿ 30 ವಿಕೆಟ್‌ ಕಬಳಿಸಿ, 4.91ರ ಎಕಾನಮಿ ರೇಟ್‌ ಕಾಯ್ದುಕೊಂಡಿದ್ದರು. ಹಾರ್ದಿಕ್‌ ಮರಳಿದ ಬಳಿಕ ಸಿರಾಜ್‌ ತಂಡದಲ್ಲಿ ಸ್ಥಾನಕ್ಕಾಗಿ ಶಮಿ ಜೊತೆ ಪೈಪೋಟಿಗೆ ಇಳಿಯಬೇಕಾಬಹುದು.

ದಿಕ್ಕೆಟ್ಟಿರುವ ಇಂಗ್ಲೆಂಡ್‌: ಹಾಲಿ ಚಾಂಪಿಯನ್‌ ತಂಡವು ಈಗಾಗಲೇ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿದರೂ ಯಶಸ್ಸು ಸಿಕ್ಕಿಲ್ಲ. ತಂಡದಲ್ಲಿರುವ ಎಲ್ಲಾ 15 ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಿರುವ ಇಂಗ್ಲೆಂಡ್‌, ತನ್ನ ಉಪನಾಯಕನನ್ನೇ 3 ಪಂದ್ಯಗಳಿಗೆ ಹೊರಗಿಟ್ಟಿತ್ತು. ನಿರ್ಭೀತ ಆಟದ ಶೈಲಿ ಕೈಹಿಡಿಯದಿದ್ದಾಗ ರಕ್ಷಣಾತ್ಮಕವಾಗಿ ಆಡುವ ಪ್ರಯೋಗವೂ ತಂಡಕ್ಕೆ ಗೆಲುವು ತಂದುಕೊಟ್ಟಿಲ್ಲ.

ಇನ್ನು ನಾಯಕ ಜೋಸ್‌ ಬಟ್ಲರ್‌ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ತಂಡ ನಿವರ್ಹಣೆಯಲ್ಲೂ ಎಡವುತ್ತಿದ್ದಾರೆ. ಅವರ ಕೆಲ ನಿರ್ಧಾರಗಳು ಭಾರಿ ಟೀಕೆಗೆ ಗುರಿಯಾಗಿವೆ. ವಿಶ್ವಕಪ್‌ ಬಳಿಕ ಬಟ್ಲರ್‌ ತಲೆದಂಡವಾದರೂ ಅಚ್ಚರಿಯಿಲ್ಲ.

ಒಟ್ಟು ಮುಖಾಮುಖಿ: 106

ಭಾರತ: 57

ಇಂಗ್ಲೆಂಡ್‌: 44

ಟೈ: 02

ಫಲಿತಾಂಶವಿಲ್ಲ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್‌ ರಾಹುಲ್‌, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌.

ಇಂಗ್ಲೆಂಡ್‌: ಜಾನಿ ಬೇರ್‌ಸ್ಟೋವ್‌, ಡೇವಿಡ್ ಮಲಾನ್‌, ಜೋ ರೂಟ್‌, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್‌(ನಾಯಕ), ಹ್ಯಾರಿ ಬ್ರೂಕ್‌, ಲಿಯಾಮ್ ಲಿವಿಂಗ್‌ಸ್ಟೋನ್‌, ಕ್ರಿಸ್ ವೋಕ್ಸ್‌, ಡೇವಿಡ್ ವಿಲ್ಲಿ, ಆ್ಯಟ್ಕಿನ್ಸನ್‌, ರಶೀದ್‌ ಖಾನ್.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಕೆಂಪು ಮಣ್ಣಿನ ಪಿಚ್‌ನಲ್ಲಿ ನಡೆದಿರುವ ಈ ವಿಶ್ವಕಪ್‌ನ 3 ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಪಡೆದಿದ್ದಾರೆ. ಈ ಪಂದ್ಯಕ್ಕೆ ಆಯ್ಕೆ ಮಾಡಿರುವ ಪಿಚ್‌ ಕೂಡ ಕೆಂಪು ಮಣ್ಣಿನ ಪಿಚ್‌ ಆಗಿದ್ದರೂ, ಪಿಚ್‌ ಮೇಲೆ ಗಣನೀಯ ಪ್ರಮಾಣದ ಹುಲ್ಲಿದೆ. ಹೀಗಾಗಿ, ವೇಗಿಗಳಿಗೆ ನೆರವು ದೊರೆಯುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಭಾರತ ಮೂವರು ವೇಗಿಗಳೊಂದಿಗೆ ಆಡುವ ಸಾಧ್ಯತೆ ಹೆಚ್ಚು.