ರೋಹಿತ್ ಶರ್ಮಾ ಜವಾಬ್ದಾರಿಯುತ ಆಟ; ಇಂಗ್ಲೆಂಡ್‌ಗೆ ಸಾಧಾರಣ ಗುರಿ ನೀಡಿದ ಭಾರತ
ಇಲ್ಲಿನ ಏಕನಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 40 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿದರು.

ಲಖನೌ(ಅ.29): ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ(87) ಹಾಗೂ ಸೂರ್ಯಕುಮಾರ್ ಯಾದವ್(47) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನಿಗದಿಯ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಸಾಧಾರಣ ಗುರಿ ನೀಡಿದೆ.
ಇಲ್ಲಿನ ಏಕನಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 40 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿದರು. ಶುಭ್‌ಮನ್ ಗಿಲ್ ಕೇವಲ 9 ರನ್ ಗಳಿಸಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಟೀಂ ಇಂಡಿಯಾ ರನ್ ಮಷೀನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ 9 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದರು. ಇನ್ನು ಶ್ರೇಯಸ್ ಅಯ್ಯರ್ ಫುಲ್ ಶಾಟ್ ಮಾಡುವ ಯತ್ನದಲ್ಲಿ ಕ್ರಿಸ್ ವೋಕ್ಸ್‌ಗೆ ಎರಡನೇ ಬಲಿಯಾದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಯ್ಯರ್ ಗಳಿಸಿದ್ದು ಕೇವಲ 4 ರನ್ ಮಾತ್ರ.
ಸಾರಾ ಹೃದಯಭಗ್ನ; ತೆಂಡುಲ್ಕರ್ ಮಗಳ ಹೊಸ ಪೋಸ್ಟ್ ವೈರಲ್..! ಯಾಕೆ? ಏನಾಯ್ತು?
ಕುಸಿದ ಭಾರತಕ್ಕೆ ರೋಹಿತ್-ರಾಹುಲ್ ಆಸರೆ: ಕೇವಲ 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 4ನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ ಆಸರೆಯಾದರು. ಆರಂಭದಲ್ಲಿ ಎಚ್ಚರಿಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಲೀಲಾಜಾಲವಾಗಿ ರನ್ ಗಳಿಸಲಾರಂಭಿಸಿದರು. ಈ ಜೋಡಿ 111 ಎಸೆತಗಳನ್ನು ಎದುರಿಸಿ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 58 ಎಸೆತಗಳನ್ನು ಎದುರಿಸಿ 39 ರನ್ ಗಳಿಸಿದ್ದ ಕೆ ಎಲ್ ರಾಹುಲ್, ವಿಲ್ಲಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಬೇರ್‌ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ನಾಯಕನಾಟವಾಡಿದ ರೋಹಿತ್ ಶರ್ಮಾ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ರೋಹಿತ್ ಶರ್ಮಾ 66 ಎಸೆತಗಳನ್ನು ಎದುರಿಸಿ ಏಕದಿನ ಕ್ರಿಕೆಟ್ ವೃತ್ತಿಜೀವನದ 54ನೇ ಅರ್ಧಶತಕ ಬಾರಿಸಿದರು. ಇದರ ಜತೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 12ನೇ ಬಾರಿಗೆ 50+ ರನ್ ಬಾರಿಸಿದ ಸಾಧನೆ ಮಾಡಿದರು. ಇನ್ನು ಇದೇ ಇನಿಂಗ್ಸ್ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18000+ ರನ್ ಬಾರಿಸಿದ ಸಾಧನೆಯನ್ನು ಮಾಡಿದರು. ಅಂತಿಮವಾಗಿ ರೋಹಿತ್ ಶರ್ಮಾ 101 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್ ಬಾರಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.
ಭಾರತಕ್ಕೆ ಆರಂಭಿಕ ಆಘಾತ; ಪೆವಿಲಿಯನ್ ಪರೇಡ್ ನಡೆಸಿದ ಗಿಲ್-ಕೊಹ್ಲಿ-ಅಯ್ಯರ್
ಮಿಂಚಿದ ಸೂರ್ಯ: ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ರವೀಂದ್ರ ಜಡೇಜಾ ಕೂಡಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಶಮಿ ಕೂಡಾ ಕೇವಲ 1 ರನ್ ಗಳಿಸಿ ಮಾರ್ಕ್ ವುಡ್‌ಗೆ ವಿಕೆಟ್ ಒಪ್ಪಿಸಿದರು. ಇದರ ನಡುವೆ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ತಂಡದ ಮೊತ್ತವನ್ನು ಇನ್ನೂರರ ಗಡಿ ಡಾಟಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಸೂರ್ಯಕುಮಾರ್ ಯಾದವ್ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 49 ರನ್ ಬಾರಿಸಿ ಡೇವಿಡ್ ವಿಲ್ಲಿಗೆ ಮೂರನೇ ಬಲಿಯಾದರು.
ಇನ್ನು ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ 21 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿದರು. ಬುಮ್ರಾ 16 ರನ್ ಬಾರಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರೆ, ಕುಲ್ದೀಪ್ ಯಾದವ್ 9 ರನ್ ಗಳಿಸಿ ಅಜೇಯರಾಗುಳಿದರು.