ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ, ಸತತ 4ನೇ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಕಳೆದ 12 ತಿಂಗಳಲ್ಲಿ ಭಾರತ ವಿರುದ್ಧ ಬಾಂಗ್ಲಾ ಉತ್ತಮ ದಾಖಲೆ ಹೊಂದಿದ್ದರೂ, ಭಾರತದಲ್ಲಿ ಭಾರತವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ.

ಪುಣೆ(ಅ.19): ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿತು. ಆಸ್ಟ್ರೇಲಿಯಾ ತನ್ನ ಚಾಂಪಿಯನ್‌ ಆಟವನ್ನು ಮರೆತಂತೆ ಕಾಣುತ್ತಿದೆ. ಪಾಕಿಸ್ತಾನ ತಂಡದಲ್ಲೂ ಹಲವು ಕೊರತೆಗಳಿವೆ. ನೆದರ್‌ಲೆಂಡ್ಸ್‌ ‘ಯೋಜನೆ’ ಮುಂದೆ ದಕ್ಷಿಣ ಆಫ್ರಿಕಾ ಮಂಕಾಗಿದ್ದನ್ನು ನೋಡಿದ್ದೇವೆ. ಟ್ರೋಫಿ ಗೆಲ್ಲುವ ಫೇವರಿಟ್ಸ್‌ ಆಗಿ ಕಾಲಿಟ್ಟ ತಂಡಗಳ ಪೈಕಿ, ಭಾರತ ಮಾತ್ರ ಫೇವರಿಟ್‌ ಪಟ್ಟ ಉಳಿಸಿಕೊಂಡಿದ್ದು, ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ, ಸತತ 4ನೇ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಕಳೆದ 12 ತಿಂಗಳಲ್ಲಿ ಭಾರತ ವಿರುದ್ಧ ಬಾಂಗ್ಲಾ ಉತ್ತಮ ದಾಖಲೆ ಹೊಂದಿದ್ದರೂ, ಭಾರತದಲ್ಲಿ ಭಾರತವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ.

ಆತಿಥೇಯ ತಂಡವು ಮೊದಲ 3 ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಸಾಧಿಸಿದೆ. ಮೂರೂ ಪಂದ್ಯಗಳಲ್ಲಿ ತಂಡಕ್ಕೆ ಸಂಕಷ್ಟ ಎದುರಾದರೂ, ಅದನ್ನು ಮೀರಿ ಗೆಲುವನ್ನು ಒಲಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಗುರಿ ಬೆನ್ನತ್ತುವಾಗ ಭಾರತ 2 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತ್ತು. ಭಾರತಕ್ಕೆ ಅಫ್ಘಾನಿಸ್ತಾನ 273 ರನ್‌ ಗುರಿ ನಿಗದಿ ಮಾಡಿತು. ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ ಗಟ್ಟಿಯಾದ ಜೊತೆಯಾಟದ ಮೂಲಕ ಭಾರತೀಯರಲ್ಲಿ ಆತಂಕ ಮೂಡಿಸಿದ್ದರು. ಆದರೆ ಕೊನೆಯಲ್ಲಿ ಇದ್ಯಾವುದೂ ಭಾರತ ಗೆಲ್ಲುವುದನ್ನು ತಪ್ಪಿಸಲಾಗಲಿಲ್ಲ.

ವಿಶ್ವಕಪ್‌ ಕ್ರಿಕೆಟ್‌ಗೆ ಆಫರ್‌ ಕೊಟ್ಟ ನಮ್ಮ ಮೆಟ್ರೋ: ಬೆಂಗಳೂರು ಪಂದ್ಯಕ್ಕೆ ವಿಶೇಷ ಟಿಕೆಟ್‌ ವ್ಯವಸ್ಥೆ

ಪ್ರಚಂಡ ಲಯ: ಜಸ್‌ಪ್ರೀತ್‌ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್‌ ಪಡೆ ಲಭ್ಯವಿದ್ದ 30 ವಿಕೆಟ್‌ಗಳ ಪೈಕಿ 28 ವಿಕೆಟ್‌ ಕಬಳಿಸಿದೆ. ಭಾರತ 3 ಪಂದ್ಯಗಳಲ್ಲೂ ಗುರಿ ಬೆನ್ನತ್ತಿದ್ದು, ಒಟ್ಟು ಕೇವಲ 9 ವಿಕೆಟ್‌ ಕಳೆದುಕೊಂಡಿದೆ. ಯಾವುದೇ ಪಂದ್ಯದಲ್ಲೂ 4ಕ್ಕಿಂತ ಹೆಚ್ಚು ವಿಕೆಟ್‌ ಬಿದ್ದಿಲ್ಲ. ನಾಯಕ ರೋಹಿತ್‌ ಶರ್ಮಾ ಅವರ ಹೆಚ್ಚುವರಿ ಆಕ್ರಮಣಕಾರಿ ಆಟದ ಶೈಲಿ ಭಾರತಕ್ಕೆ ಯಶಸ್ಸು ತಂದುಕೊಡುತ್ತಿದ್ದು, ಪುಣೆಯಲ್ಲಿ ಅವರಿಗೆ ಮತ್ತೊಂದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಕಾಯುತ್ತಿದೆ.

ಕುಲ್ದೀಪ್‌ ಯಾದವ್‌ 3 ಪಂದ್ಯಗಳಲ್ಲಿ 30 ಓವರ್‌ ಬೌಲ್‌ ಮಾಡಿ ಕೇವಲ 3.9ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ. 5 ವಿಕೆಟ್‌ ಸಹ ಕಬಳಿಸಿರುವ ಕುಲ್ದೀಪ್‌, ಈ ಪಂದ್ಯದಲ್ಲೂ ಭಾರತದ ಟ್ರಂಪ್‌ ಕಾರ್ಡ್‌ ಎನಿಸಲಿದ್ದಾರೆ. ಭಾರತಕ್ಕೆ ತನ್ನ ಗೆಲುವಿನ ಸಂಯೋಜನೆಯನ್ನು ಬದಲಿಸುವ ಯಾವ ಅಗತ್ಯವೂ ಕಾಣುತ್ತಿಲ್ಲ. ಹೀಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ.

'ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಿಮ್ಮ ಜತೆ ಡೇಟ್ ಮಾಡ್ತೇನೆ': ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್‌ ನಟಿಯ ಬೋಲ್ಡ್ ಆಫರ್

ಬಾಂಗ್ಲಾಕ್ಕೆ ಲಯದ ಕೊರತೆ: ಬಾಂಗ್ಲಾದೇಶ ತಂಡವು ಅನುಭವಿ ಹಾಗೂ ಯುವ ಆಟಗಾರರನ್ನು ಹೊಂದಿದೆ. ತಂಡದಲ್ಲಿ ಪ್ರತಿಭೆಗೆ ಕೊರತೆ ಇಲ್ಲದಿದ್ದರೂ, ಲಯದ ಕೊರತೆ ತಂಡವನ್ನು ಕಾಡುತ್ತಿದೆ. 3 ಪಂದ್ಯಗಳಲ್ಲಿ 2 ಅರ್ಧಶತಕ ಬಾರಿಸಿರುವ ಮುಷ್ಫಿಕುರ್‌ ರಹೀಂ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ರನ್‌ ಗಳಿಸಲು ಕಷ್ಟಪಡುತ್ತಿದ್ದಾರೆ. ಕಳೆದ ವಾರ ಗಾಯಗೊಂಡಿದ್ದ ಶಕೀಬ್‌ ಅಲ್ ಹಸನ್‌ ಚೇತರಿಸಿಕೊಂಡಿದ್ದು, ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ತಂಡದ ಬೌಲರ್‌ಗಳು ಮೊನಚು ಕಳೆದುಕೊಂಡಿದ್ದು, ಭಾರತೀಯರಿಂದ ದಂಡನೆಗೆ ಒಳಗಾದರೂ ಅಚ್ಚರಿಯಿಲ್ಲ. ಬಾಂಗ್ಲಾ ಈ ಪಂದ್ಯದಲ್ಲಿ ಭಾರತವನ್ನು ಎಷ್ಟರ ಮಟ್ಟಿಗೆ ಇಕ್ಕಟಿಕೆ ಸಿಲುಕಿಸಲಿದೆ ಎನ್ನುವುದು ಬೌಲರ್‌ಗಳ ಪ್ರದರ್ಶನದ ಮೇಲೆ ನಿರ್ಧಾರವಾಗಲಿದೆ.

ಒಟ್ಟು ಮುಖಾಮುಖಿ: 40

ಭಾರತ: 31

ಬಾಂಗ್ಲಾದೇಶ: 08

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ಬಾಂಗ್ಲಾ: ತನ್ಜಿದ್‌, ಲಿಟನ್‌ ದಾಸ್, ನಜ್ಮುಲ್‌ ಹೊಸೈನ್, ಶಕೀಬ್‌ ಅಲ್ ಹಸನ್(ನಾಯಕ), ತೌಹಿದ್‌, ಮುಷ್ಫಿಕುರ್‌ ರಹೀಂ, ಮೆಹಿದಿ ಹಸನ್‌, ಮಹ್ಮುದುಲ್ಲಾ, ಟಸ್ಕಿನ್‌ ಅಹಮ್ಮದ್, ಶೋರಿಫುಲ್‌ ಇಸ್ಲಾಂ, ಮುಸ್ತಾಫಿಜುರ್‌ ರೆಹಮಾನ್.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

2017ರ ನಂತರ ಇಲ್ಲಿ ನಡೆದಿರುವ 5 ಏಕದಿನ ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 300ಕ್ಕಿಂತ ಹೆಚ್ಚು ರನ್‌ ಕಲೆಹಾಕಿದೆ. ಈ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್‌ ಸಹ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು.