ಟೂರ್ನಿಯಲ್ಲಿ 400ಕ್ಕೂ ಹೆಚ್ಚು ರನ್‌ ಕಲೆಹಾಕಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆಲ ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿರುವ ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್‌ ಈ ಪಂದ್ಯದಲ್ಲೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಮಾತ್ರ, ಭಾರತ ಸತತ 8ನೇ ಜಯದ ನಿರೀಕ್ಷೆ ಇಟ್ಟುಕೊಳ್ಳಬಹುದು.

ಕೋಲ್ಕತಾ(ನ.05): ಸೆಮಿಫೈನಲ್‌ಗೂ ಮುನ್ನ ಭಾರತ ಯಾವುದಾದರೂ ಒಂದು ಎದುರಾಳಿಯ ವಿರುದ್ಧ ತನ್ನ ಆಟಗಾರರನ್ನು ಪರೀಕ್ಷೆಗಿಳಿಸಲು ಎದುರು ನೋಡುತ್ತಿದ್ದರೆ ಅದು ದಕ್ಷಿಣ ಆಫ್ರಿಕಾವೇ ಆಗಿರಬೇಕು. ಈ ವಿಶ್ವಕಪ್‌ನಲ್ಲಿ ಭಾರತದಷ್ಟೇ ಅಬ್ಬರಿಸುತ್ತಿರುವ ಮತ್ತೊಂದು ತಂಡ ಯಾವುದಾದರೂ ಇದ್ದರೆ ಅದು ದಕ್ಷಿಣ ಆಫ್ರಿಕಾ ಮಾತ್ರ. ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಗಳಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಭಾರತ ಹಾಗೂ ದ.ಆಫ್ರಿಕಾ, ಭಾನುವಾರ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಅಭಿಮಾನಿಗಳಲ್ಲಿ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

14 ಅಂಕ ಕಲೆಹಾಕಿರುವ ಭಾರತ ಈ ಪಂದ್ಯ ಜಯಿಸಿದರೆ, ರೌಂಡ್‌ ರಾಬಿನ್‌ ಹಂತವನ್ನು ಅಗ್ರಸ್ಥಾನದಲ್ಲೇ ಮುಕ್ತಾಯಗೊಳಿಸುವುದು ಖಚಿತ. ಒಂದು ವೇಳೆ ಸೋತರೆ, ಈ ವಿಶ್ವಕಪ್‌ನಲ್ಲಿ ಮೊದಲ ಸೋಲು ಎದುರಾಗಲಿದ್ದು, ಆಗ ಕೊನೆಯ ಪಂದ್ಯವನ್ನು ಗೆದ್ದರೂ 2ನೇ ಸ್ಥಾನಿಯಾಗಿ ಸೆಮೀಸ್‌ಗೆ ಕಾಲಿಡಬೇಕಾಗಬಹುದು. ಅಗ್ರಸ್ಥಾನ ಪಡೆದರೆ, ಸೆಮಿಫೈನಲ್‌ನಲ್ಲಿ ಮತ್ತೆ ದಕ್ಷಿಣ ಆಫ್ರಿಕಾವನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಬಹುದು.

ಭಾರತ-ಪಾಕ್ ಸೆಮಿಫೈನಲ್ ಪಂದ್ಯ ಟ್ರೆಂಡ್, ಬಾಬರ್ ಅಜಮ್ ಸೈನ್ಯಕ್ಕಿದೆ 2 ದಾರಿ!

ಈ ಪಂದ್ಯ ಭಾರತದ ಬಲಿಷ್ಠ ಬೌಲಿಂಗ್‌ ಪಡೆ ಹಾಗೂ ದಕ್ಷಿಣ ಆಫ್ರಿಕಾದ ಪ್ರಚಂಡ ಬ್ಯಾಟಿಂಗ್‌ ಪಡೆಯ ನಡುವಿನ ಗುದ್ದಾಟ ಎಂದೇ ಖ್ಯಾತಿ ಪಡೆದಿದೆ. ಭಾರತೀಯ ಬ್ಯಾಟರ್‌ಗಳಿಂದ ಅಮೋಘ ಪ್ರದರ್ಶನ ಮೂಡಿಬರುತ್ತಿದ್ದರೂ, ಬೌಲರ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಮೊಹಮದ್‌ ಶಮಿ ಸೇರ್ಪಡೆ, ಭಾರತದ ವೇಗದ ಬೌಲಿಂಗ್‌ ಪಡೆಯನ್ನು ಅಸಾಧಾರಣಗೊಳಿಸಿದೆ. ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌ ಮೊದಲ ಪವರ್‌-ಪ್ಲೇನಲ್ಲಿ ಎದುರಾಳಿಯ ಮೇಲೆ ಹೇರುವ ಒತ್ತಡವನ್ನು ಶಮಿ ಮುಂದುವರಿಸಿಕೊಂಡು ಹೋಗುವುದು ತಂಡಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತಿದೆ. ವೇಗಿಗಳ ಅಬ್ಬರದ ನಡುವೆ ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜಾರ ಪ್ರದರ್ಶನಕ್ಕೆ ಸೂಕ್ತ ಪ್ರಶಂಸೆ ಸಿಗುತ್ತಿಲ್ಲವಾದರೂ, ಈ ಇಬ್ಬರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ದ.ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದ್ದರೆ, ಭಾರತೀಯ ಬೌಲರ್‌ಗಳಿಂದ ಮತ್ತೊಂದು ಅದ್ಭುತ ಪ್ರದರ್ಶನ ಮೂಡಿಬರಬೇಕು.

ಟೂರ್ನಿಯಲ್ಲಿ 400ಕ್ಕೂ ಹೆಚ್ಚು ರನ್‌ ಕಲೆಹಾಕಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆಲ ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿರುವ ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್‌ ಈ ಪಂದ್ಯದಲ್ಲೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಮಾತ್ರ, ಭಾರತ ಸತತ 8ನೇ ಜಯದ ನಿರೀಕ್ಷೆ ಇಟ್ಟುಕೊಳ್ಳಬಹುದು.

ICC World Cup 2023: ಬೆಂಗಳೂರಲ್ಲಿ ಸಚಿನ್ ತೆಂಡುಲ್ಕರ್ ವಿಶ್ವದಾಖಲೆ ಛಿದ್ರಮಾಡಿದ ರಚಿನ್ ರವೀಂದ್ರ..!

ಈಗಾಗಲೇ ಟೂರ್ನಿಯಲ್ಲಿ 4 ಶತಕ ಸಿಡಿಸಿರುವ ಕ್ವಿಂಟನ್‌ ಡಿ ಕಾಕ್‌, ಸ್ಫೋಟಕ ಶತಕಗಳನ್ನು ಚಚ್ಚಿರುವ ಏಡನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌, ಅಪಾಯಕಾರಿ ಡೇವಿಡ್‌ ಮಿಲ್ಲರ್‌ ಹೀಗೆ ಬ್ಯಾಟಿಂಗ್‌ ವೀರರ ದಂಡೇ ಇದೆ. ಇವುರುಗಳ ಜೊತೆ ರಬಾಡ, ಯಾನ್ಸನ್‌, ಎನ್‌ಗಿಡಿಯಂತಹ ಗುಣಮಟ್ಟದ ವೇಗಿಗಳ ಬಲವೂ ದ.ಆಫ್ರಿಕಾಕ್ಕಿದು ಈ ಪಂದ್ಯ ಅಭಿಮಾನಿಗಳಿಗೆ ರಸದೌತಣ ಉಣಬಡಿಸುವುದರಲ್ಲಿ ಅನುಮಾನವಿಲ್ಲ.

ಒಟ್ಟು ಮುಖಾಮುಖಿ: 90

ಭಾರತ: 37

ದ.ಆಫ್ರಿಕಾ: 50

ಫಲಿತಾಂಶವಿಲ್ಲ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ತೆಂಬಾ ಬವುಮಾ(ನಾಯಕ), ರಾಸ್ಸಿ ವ್ಯಾನ್ ಡರ್ ಡುಸ್ಸೆನ್‌, ಏಯ್ಡನ್ ಮಾರ್ಕ್‌ರಮ್‌, ಡೇವಿಡ್ ಮಿಲ್ಲರ್‌, ಹೆನ್ರಿಚ್ ಕ್ಲಾಸೆನ್‌, ಮಾರ್ಕೊ ಯಾನ್ಸನ್‌, ಕೋಟ್ಜೀ, ಕೇಶವ್‌ ಮಹರಾಜ್, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ.

ಪಂದ್ಯ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌: ಈಡನ್‌ ಗಾರ್ಡನ್ಸ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾದರೂ, ಈ ವಿಶ್ವಕಪ್‌ನಲ್ಲಿ ಇಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ. ಸ್ಪಿನ್ನರ್‌ಗಳಿಗೆ ನೆರವು ದೊರೆಯುವ ನಿರೀಕ್ಷೆ ಇದೆ.