ICC World Cup 2023: ಎಬಿಡಿ ದಾಖಲೆ ಪುಡಿ, ರೋಹಿತ್ ಶರ್ಮಾ ರೆಕಾರ್ಡ್ಸ್ ಸುರಿಮಳೆ..!
ಭಾನುವಾರ ನೆದರ್‌ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ 2 ಸಿಕ್ಸರ್ ಸಿಡಿಸಿದ್ದು, ಈ ವರ್ಷದ ಸಿಕ್ಸರ್ ಗಳಿಕೆಯನ್ನು 59ಕ್ಕೆ ಏರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದರು. ವಿಲಿಯರ್ಸ್ 2015ರಲ್ಲಿ 58 ಸಿಕ್ಸರ್ ಸಿಡಿಸಿದ್ದರು. ಕ್ರಿಸ್ ಗೇಲ್ 2019ರಲ್ಲಿ 56 ಸಿಕ್ಸರ್ ಬಾರಿಸಿದ್ದರು.
ಬೆಂಗಳೂರು(ನ.13): ತಮ್ಮ ಆಕರ್ಷಕ ಸಿಕ್ಸರ್‌ಗಳ ಮೂಲಕವೇ ವಿಶ್ವ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿರುವ ಭಾರತದ ನಾಯಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಭಾನುವಾರ ನೆದರ್‌ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ 2 ಸಿಕ್ಸರ್ ಸಿಡಿಸಿದ್ದು, ಈ ವರ್ಷದ ಸಿಕ್ಸರ್ ಗಳಿಕೆಯನ್ನು 59ಕ್ಕೆ ಏರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದರು. ವಿಲಿಯರ್ಸ್ 2015ರಲ್ಲಿ 58 ಸಿಕ್ಸರ್ ಸಿಡಿಸಿದ್ದರು. ಕ್ರಿಸ್ ಗೇಲ್ 2019ರಲ್ಲಿ 56 ಸಿಕ್ಸರ್ ಬಾರಿಸಿದ್ದರು.
ವಿಶ್ವಕಪ್‌ನಲ್ಲೂ ದಾಖಲೆ: ರೋಹಿತ್ ಈ ವಿಶ್ವಕಪ್‌ನಲ್ಲೇ 23 ಸಿಕ್ಸರ್ ಸಿಡಿಸಿದ್ದು, ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. 2019ರಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ 22 ಸಿಕ್ಸರ್ ಬಾರಿಸಿದ್ದರು.
100 ಫಿಫ್ಟಿ ಮೈಲಿಗಲ್ಲು!
ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳ ಮೈಲಿಗಲ್ಲನ್ನೂ ತಲುಪಿದರು. ಟೆಸ್ಟ್‌ನ 88 ಇನ್ನಿಂಗ್ಸ್‌ಗಳಲ್ಲಿ 16, 252 ಏಕದಿನದಲ್ಲಿ 55 ಹಾಗೂ 140 ಟಿ20 ಇನ್ನಿಂಗ್ಸ್‌ಗಳಲ್ಲಿ 29 ಫಿಫ್ಟಿ ಬಾರಿಸಿದ್ದಾರೆ. ಈ ಮೂಲಕ 100 ಫಿಫ್ಟಿ ಬಾರಿಸಿದ ಭಾರತೀಯರ ಎಲೈಟ್ ಕ್ಲಬ್ ಸೇರ್ಪಡೆಗೊಂಡರು. ಸಚಿನ್ ತೆಂಡುಲ್ಕರ್ 164, ರಾಹುಲ್ ದ್ರಾವಿಡ್ 146, ವಿರಾಟ್ ಕೊಹ್ಲಿ 136, ಎಂ.ಎಸ್.ಧೋನಿ 108, ಗಂಗೂಲಿ 107 ಫಿಫ್ಟಿ ಸಿಡಿಸಿದ್ದಾರೆ.
ಸತತ 2 ವಿಶ್ವಕಪ್‌ನಲ್ಲೂ 500+ ರನ್: ದಾಖಲೆ!
ರೋಹಿತ್ ಈ ವಿಶ್ವಕಪ್‌ನಲ್ಲಿ 55.89ರ ಸರಾಸರಿಯಲ್ಲಿ 503 ರನ್ ಕಲೆಹಾಕಿದ್ದು, ಸತತ 2 ವಿಶ್ವಕಪ್ ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. 2019ರಲ್ಲಿ ಅವರು 648 ರನ್ ಕಲೆಹಾಕಿದ್ದರು. ಇನ್ನು ವಿಶ್ವಕಪ್ ಆವೃತ್ತಿಯೊಂದರಲ್ಲಿ 500 ರನ್ ಸಿಡಿಸಿದ ಮೊದಲ ನಾಯಕ ಎನ್ನುವ ದಾಖಲೆಗೂ ರೋಹಿತ್ ಪಾತ್ರರಾಗಿದ್ದಾರೆ.
ವರ್ಷದಲ್ಲಿ ಗರಿಷ್ಠ ಸಿಕ್ಸರ್: ಭಾರತ ಹೊಸ ದಾಖಲೆ!
ಬೆಂಗಳೂರು: ಏಕದಿನ ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಭಾರತ ತಂಡ ಬರೆದಿದೆ. ನೆದರ್‌ಲೆಂಡ್ಸ್ ವಿರುದ್ಧದ ಇನ್ನಿಂಗ್ಸಲ್ಲಿ 16 ಸಿಕ್ಸರ್ ಸಿಡಿಸಿದ ಭಾರತ, 2023ರಲ್ಲಿ ಒಟ್ಟು ಸಿಕ್ಸರ್‌ಗಳ ಗಳಿಕೆಯನ್ನು 215ಕ್ಕೆ ಏರಿಸಿತು. ಇದರೊಂದಿಗೆ 2019ರಲ್ಲಿ 209 ಸಿಕ್ಸರ್ ಸಿಡಿಸಿದ್ದ ವೆಸ್ಟ್‌ಇಂಡೀಸ್‌ನ ದಾಖಲೆಯನ್ನು ಮುರಿಯಿತು. ಈ ವರ್ಷ ದಕ್ಷಿಣ ಆಫ್ರಿಕಾ 203 ಸಿಕ್ಸರ್ ಸಿಡಿಸಿದ್ದು, ಭಾರತದ ಜೊತೆ ಪೈಪೋಟಿಯಲ್ಲಿದೆ.
ಚಿನ್ನಸ್ವಾಮಿಯಲ್ಲಿ ಒಂಡೇ ಕ್ರಿಕೆಟ್‌ನ ಗರಿಷ್ಠ ಸ್ಕೋರ್
ಬೆಂಗಳೂರು: ಭಾನುವಾರ ವಿಶ್ವಕಪ್‌ನ ನೆದರ್‌ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟದಲ್ಲಿ ಕಲೆಹಾಕಿದ 410 ರನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಾದ ಗರಿಷ್ಠ ಏಕದಿನ ಸ್ಕೋರ್ ಎನಿಸಿಕೊಂಡಿತು. ಇದೇ ವಿಶ್ವಕಪ್‌ನಲ್ಲೇ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ 6 ವಿಕೆಟ್‌ಗೆ 401 ರನ್ ಗಳಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. 8 ದಿನಗಳ ಅಂತರದಲ್ಲಿ ಅದನ್ನು ಭಾರತ ಅಳಿಸಿ ಹಾಕಿದೆ. ಈ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 2 ಬಾರಿ ಮಾತ್ರ 400+ ರನ್ ದಾಖಲಾಗಿವೆ. ಈ ಎರಡು ಪಂದ್ಯಗಳಿಗೂ ಮುನ್ನ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್‌ಗೆ 383 ನ್ ಗಳಿಸಿದ್ದು ಗರಿಷ್ಠ ರನ್ ದಾಖಲೆ ಎನಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಸಿಡಿಸಿದ್ದರು.